ಜೈನ ಧರ್ಮದ ಅಹಿಂಸಾ ತತ್ವ ಸಮಾಜಕ್ಕೆ ಮಾದರಿಯಾಗಿದೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು, ಮುಂದಿನ ಸಂಪುಟ ಸಭೆಯಲ್ಲಿ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ತಾಲ್ಲೂಕಿನ ಬಸ್ತವಾಡದಲ್ಲಿ ಕರ್ನಾಟಕ ಸಮಸ್ತ ಜೈನ ಅಲ್ಪ ಸಂಖ್ಯಾತರ ಹೋರಾಟ ಸಮಿತಿ ಸೋಮವಾರ ಆಯೋಜಿಸಿದ್ದ ಜೈನ ಸಮಾವೇಶದಲ್ಲಿ ಜೈನ ಸಮುದಾಯದವರ ಬೇಡಿಕೆಗಳನ್ನು ಆಲಿಸಿ ಅವರು ಮಾತನಾಡಿದರು.
ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ. ನಿಮ್ಮ ಯಾವುದೇ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಿದೆ. ನಮ್ಮ ಮೇಲೆ ಭರವಸೆ ಇಡಿ’ ಎಂದು ಕೋರಿದರು.
‘ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ವಿತರಣೆ ಕೈಬಿಡುವ ವಿಚಾರವಾಗಿ, ಜೈನ ಸಂಪ್ರದಾಯವನ್ನು ನಾವು ಗೌರವಿಸುತ್ತೇವೆ. ನಿಮಗೆ ಧಾರ್ಮಿಕ ಭಾವನೆಗೆ ಧಕ್ಕೆ ತರುವಂಥ ಯಾವ ನಿರ್ಧಾರವನ್ನೂ ಕೈಗೊಳ್ಳುವುದಿಲ್ಲ’ ಎಂದು ಭರವಸೆ ನೀಡಿದರು.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ‘ರಾಜ್ಯ ಸರ್ಕಾರ ನಿಮ್ಮ ಪರವಾಗಿಯೇ ಇದೆ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ವಿತರಣೆಯನ್ನು ಸರ್ಕಾರ ಕಡ್ಡಾಯಗೊಳಿಸಿಲ್ಲ. ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುತ್ತೇವೆ. ಹಾಗಾಗಿ ಸಮುದಾಯದವರು ಆತಂಕಪಡುವ ಅಗತ್ಯವಿಲ್ಲ’ ಎಂದು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗೆ ಜೈನ ಸಮುದಾಯ ಮಾದರಿಯಾಗಿದೆ. ನಿಮ್ಮ ಸಮುದಾಯದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು. ಜೈನ ಶಿಕ್ಷಣ ಸಂಸ್ಥೆಗಳನ್ನು ಮೊಟ್ಟೆ ವಿತರಿಸುವುದನ್ನು ನಿಲ್ಲಿಸಬೇಕು. ಈ ಬಗ್ಗೆ ಅಧಿವೇಶನದಲ್ಲಿ ಧ್ವನಿ ಎತ್ತಿ, ಸರ್ಕಾರದ ಗಮನಸೆಳೆಯಲಾಗುವುದು’ ಎಂದರು.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ, ‘ಚಿಕ್ಕೋಡಿಯಲ್ಲಿ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಪ್ರತ್ಯೇಕ ವಸತಿ ನಿಲಯ ಮಂಜೂರುಗೊಳಿಸಲಾಗಿದೆ. ಶೀಘ್ರವೇ ಇದಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗೆ ಸಂಬಂಧಿಸಿ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು’ ಎಂದು ಹೇಳಿದರು.
ಶಾಸಕಿ ಶಶಿಕಲಾ ಜೊಲ್ಲೆ, ‘ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಲ್ಲಿ ಸರ್ಕಾರ ಜೈನ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಈ ಅಧಿವೇಶನದಲ್ಲಿ ಸರ್ಕಾರ ಇದಕ್ಕೆ ಸಮಂಜಸವಾದ ಉತ್ತರ ಕೊಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಮಾಜಿ ಶಾಸಕ ಸಂಜಯ ಪಾಟೀಲ, ‘ಜೈನ ಧರ್ಮದಲ್ಲಿ ದಿಗಂಬರ ಮತ್ತು ಶ್ವೇತಾಂಬರ ಸಮುದಾಯಗಳು ಒಂದಾಗಬೇಕು. ಸಮುದಾಯದ ಜನಪ್ರತಿನಿಧಿಗಳು ಪಕ್ಷಬೇಧ ಮರೆತು, ಜೈನ ಸಮುದಾಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರಸಂಗ ಬಂದರೆ ನಾನು ರಾಜಕೀಯವನ್ನೇ ತೊರೆಯುತ್ತೇನೆಯೇ ಹೊರತು, ಧರ್ಮ ಬಿಡುವುದಿಲ್ಲ’ ಎಂದರು.
ಗುಣಧರನಂದಿ ಮಹಾರಾಜರು ನೇತೃತ್ವ ವಹಿಸಿದ್ದರು. ಮೂಡಬಿದಿರೆಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ಕೊಲ್ಹಾಪುರದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ನಾಂದನಿ ಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ, ಸೋಂದಾ ಮಠದ ಸ್ವಾಮೀಜಿ ಮಾತನಾಡಿದರು.
ಶಾಸಕರಾದ ಅಭಯ ಪಾಟೀಲ, ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ, ಮುಖಂಡರಾದ ಉತ್ತಮ ಪಾಟೀಲ, ರವಿರಾಜ ಪಾಟೀಲ, ವಿನೋದ ದೊಡ್ಡಣ್ಣವರ, ಸುನೀಲ ಹನುಮಣ್ಣವರ ಇತರರಿದ್ದರು.
ಸಮಾವೇಶದ ನೇತೃತ್ವ ವಹಿಸಿದ್ದ ಗುಣಧರನಂದಿ ಮಹಾರಾಜರು ಮಾತನಾಡಿ, ‘ನಮ್ಮ ಸಮುದಾಯದ ಬೇಡಿಕೆಗಳನ್ನು ಸರ್ಕಾರ 20 ದಿನಗಳೊಳಗೆ ಈಡೇರಿಸಬೇಕು. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ, ಪ್ರಥಮ ಹಂತವಾಗಿ ಕನಿಷ್ಠ ₹10 ಕೋಟಿಯಾದರೂ ಮೀಸಲಿಡಲೇಬೇಕು. ಹುಬ್ಬಳ್ಳಿಯಲ್ಲಿ ನಡೆಯಲಿರುವ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣಕ ಮಹಾಮಹೋತ್ಸವಕ್ಕೆ ಸರ್ಕಾರದಿಂದ ವ್ಯವಸ್ಥೆ ಮಾಡಬೇಕು’ ಎಂದು ಕೋರಿದರು.
‘ನನಗೆ ಎರಡು ಕನಸುಗಳಿವೆ. ಒಂದು ಜೈನ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು. ಮತ್ತೊಂದು ಈಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸತೀಶ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಬೇಕು’ ಎಂದರು.
‘ಜೈನ ಸಮುದಾಯದಲ್ಲಿ ಎಲ್ಲರೂ ಆರ್ಥಿಕವಾಗಿ ಸಶಕ್ತರೇ ಇದ್ದಾರೆ. ರಾಜ್ಯದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕೇವಲ 4.5 ಲಕ್ಷ ಇಲ್ಲ. ಬದಲಿಗೆ, 20 ಲಕ್ಷವಿದೆ. ಹಾಗಾಗಿ ಸರ್ಕಾರ ಮತ್ತೊಮ್ಮೆ ಜನಗಣತಿ ಮಾಡಬೇಕು. ನಮ್ಮ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ವಿತರಣೆಯನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಜಾಗ ಕೊಟ್ಟರೆ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ನಿರ್ಮಿಸಿಕೊಳ್ಳುತ್ತೇವೆ’ ಎಂದು ಹೇಳಿದರು.