ಎಳೆಯ ಪ್ರಾಯದಲ್ಲೇ ಎಡಪಂಥೀಯ ವಿಚಾರಧಾರೆಗಳಿಗೆ ಮಾರು ಹೋಗಿದ್ದ ಕೃಷ್ಣ ಶೆಟ್ಟಿಗಾರ್ ರವರು ಕಮ್ಯುನಿಸ್ಟ್ ಚಳುವಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ತನ್ನ ಅಣ್ಣ ದಿವಂಗತ ಕಾಂ.ಚಂದ್ರಹಾಸ ಕೊಡಿಯಾಲ್ ಬೈಲ್ ರವರ ಗರಡಿಯಲ್ಲಿ ಪಳಗಿದ ಕೃಷ್ಣಣ್ಣನಿಗೆ ಕಮ್ಯುನಿಸ್ಟ್ ಪಕ್ಷವೆಂದರೆ ಪಂಚಪ್ರಾಣ. ಮಾತ್ರವಲ್ಲದೆ ಇವರ ಇಡೀ ಕುಟುಂಬವೇ ಕಮ್ಯುನಿಸ್ಟ್ ಪಕ್ಷದೊಂದಿಗೆ ಗುರುತಿಸಿತ್ತು. ದಿವಂಗತ ಕಾಂ.ನಾಗೇಶ್ ಕುಮಾರ್ ಇವರ ಅಣ್ಣನ ಮಗ.ಕಾಂ.ಕೃಷ್ಣಣ್ಣ ಪಕ್ಷದಲ್ಲಾಗಲೀ ಸಂಘಟನೆಯಲ್ಲಾಗಲೀ ಯಾವುದೇ ಹುದ್ದೆಯನ್ನು ಅಲಂಕರಿಸದೆ ಪಕ್ಷ ಸಂಘಟನೆಗಳನ್ನು ಬೆಳೆಸಲು ತೆರೆಯಮರೆಯಲ್ಲಿದ್ದು ಕಳೆದ 6 ದಶಕಗಳಿಂದ ಅವಿಶ್ರಾಂತವಾಗಿ ಶ್ರಮಿಸಿದ್ದರು.
ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಕೃಷ್ಣಣ್ಣರವರು, 1970ರ ದಶಕದಲ್ಲಿ ಜನ್ಮ ತಾಳಿದ SFI ಸಂಘಟನೆಯನ್ನು ಮಂಗಳೂರಿನಲ್ಲಿ ಬೆಳೆಸಲು ಶ್ರಮಿಸಿದ್ದ ಡಾ.ವಾರಿಯರ್, ಡಾ.ದುರ್ಗಾಪ್ರಸಾದ್ ರವರ ಜೊತೆಸೇರಿ ಅವರಿಗೆ ಸಹಾಯಕರಾಗಿ ಮಾತ್ರವಲ್ಲ ಆಶ್ರಯದಾತರಿಗೆ ನಿಂತು ಸರ್ವರೀತಿಯ ಪ್ರೋತ್ಸಾಹವನ್ನು ನೀಡಿದ್ದರು. ತನ್ನ ಯೌವನದಲ್ಲಿ ಸಾಹಿತ್ಯ ಮಾರಾಟದ ಆಸಕ್ತಿಯನ್ನು ಬೆಳೆಸಿದ ಕೃಷ್ಣಣ್ಣ, ಪಕ್ಷದ ಮುಖಪತ್ರಿಕೆಯನ್ನು ಇನ್ನಿತರ ಸಾಹಿತ್ಯವನ್ನು ಮಾರಾಟ ಮಾಡುವಲ್ಲಿ ಎತ್ತಿದ ಕೈ.ಅದಕ್ಕಾಗಿಯೇ ಅವರು ಮಂಗಳೂರಿನಲ್ಲಿ ಪತ್ರಿಕೆಯ ಅಂಗಡಿಯನ್ನು ಪ್ರಾರಂಭಿಸಿ ಬಳಿಕ 1979ರಲ್ಲಿ ಮಂಜೇಶ್ವರದ ಹೊಸಂಗಡಿಯಲ್ಲಿ ನವೀನ್ ಸ್ಟೋರ್ಸ್ ಎಂಬ ಪತ್ರಿಕೆ ಪುಸ್ತಕದ ಮಳಿಗೆಯನ್ನು ಪ್ರಾರಂಭಿಸಿದರು. ಅದು ಇವತ್ತಿಗೂ ಕಾರ್ಯಾಚರಿಸುತ್ತಿದೆ.
ಸಾಂಸ್ಕ್ರತಿಕ ರಂಗದ ಅಭಿರುಚಿಯನ್ನು ಬೆಳೆಸಿದ ಕೃಷ್ಣಣ್ಣ 1978ರಲ್ಲಿ ಸಮುದಾಯದ ಮಂಗಳೂರು ಘಟಕವನ್ನು ಸ್ಥಾಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಆ ಸಂದರ್ಭದಲ್ಲಿ ಅತ್ಯಂತ ಪ್ರಸಿದ್ದಿ ಪಡೆದ ಮಾರೀಚನ ಬಂಧುಗಳು ಎಂಬ ನಾಟಕ ಪ್ರದರ್ಶನಗೊಳ್ಳುವಲ್ಲಿ ಆರ್ಥಿಕ ಸಂಪನ್ಮೂಲ ಒದಗಿಸಿದ ಪ್ರಮುಖ ಸಂಗಾತಿಯಾಗಿದ್ದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಬಳಿಕ ಸಮುದಾಯ ಸಂಘಟನೆ ಹಮ್ಮಿಕೊಂಡ ಜಾಥಾ, ನಾಟಕ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ಅತ್ಯಂತ ಕಷ್ಟದ ಕಾಲದಲ್ಲೂ ಕೃಷ್ಣಣ್ಣ ಸಮುದಾಯದ ಜೊತೆಗೆ ಗಟ್ಟಿಯಾಗಿ ನಿಂತರು. SFIನ ಮಾಜಿ ಜಿಲ್ಲಾ ಕಾರ್ಯದರ್ಶಿ ದಿವಂಗತ ಕಾಂ.ರಾಜ್ ಕುಮಾರ್ ರವರ ಸಂಘಟನಾ ಚಟುವಟಿಕೆಗಳಿಗೆ ಆ ಕಾಲದಲ್ಲಿ ದೊಡ್ಡ ಸಹಕಾರವನ್ನು ನೀಡುವ ಮೂಲಕ ಪ್ರತಿಯೊಂದು ಸಂಗಾತಿಯ ಸಂಕಷ್ಟದಲ್ಲೂ ಜೊತೆಯಾಗುತ್ತಿದ್ದರು.
ಮಂಗಳೂರಿನಿಂದ ಮಂಜೇಶ್ವರಕ್ಕೆ ತಮ್ಮ ವಾಸಸ್ಥಳವನ್ನು ಬದಲಾಯಿಸಿದ್ದರೂ ಮಂಗಳೂರಿನ ನಂಟನ್ನು ತನ್ನ ಜೀವನದ ಕೊನೆಯ ಉಸಿರು ಇರುವವರೆಗೂ ಬಿಟ್ಟಿಲ್ಲ. ಅದಕ್ಕೆ ಸಾಕ್ಷಿ ಫೆಬ್ರವರಿ 27ರಂದು ತೊಕ್ಕೊಟ್ಟುನಲ್ಲಿ ಜರುಗಿದ DYFI ರಾಜ್ಯ ಸಮ್ಮೇಳನದ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಭಾಗವಹಿಸಿ ತನ್ನ ಸಂಪೂರ್ಣ ಸಹಕಾರವನ್ನು ನೀಡಿದ್ದರು. ಕೋಮುವಾದಿ ಶಕ್ತಿಗಳ ವಿರುದ್ದ ನಿರ್ಭಿಡೆಯಿಂದ ಜನಪರ ನಿಲುವುಗಳನ್ನು ಪ್ರತಿಪಾದಿಸಿ ಸಾವಿರಾರು ಯುವಕರನ್ನು ಸೇರಿಸಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕೆ ಅಪಾರ ಸಂತಸ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಆರ್ಥಿಕವಾಗಿ ಅಷ್ಟೇನೂ ಹೇಳಿಕೊಳ್ಳುವಷ್ಟು ಬಲಾಡ್ಯರಾಗಿರದಿದ್ದರೂ, ತಮ್ಮ ದುಡಿಮೆಯ ಒಂದು ಪಾಲನ್ನು ತಾನು ನಂಬಿದ ಸಿದ್ದಾಂತ,ಪಕ್ಷ, ಚಳುವಳಿಗೆ ಸಮರ್ಪಣಾಭಾವದಿಂದ ಅರ್ಪಿಸುವ ಮಹಾನ್ ಗುಣವನ್ನು ಕೃಷ್ಣಣ್ಣರವರಿಂದ ಕಲಿಯಬೇಕಾಗಿದೆ. ದ.ಕ.ಜಿಲ್ಲೆಯಲ್ಲಿ ಯಾವುದೇ ಚಳುವಳಿ ಹೋರಾಟಗಳು ನಡೆದಾಗ ಸಂಪೂರ್ಣ ಸಹಕಾರ ನೀಡುವುದಲ್ಲದೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಕೃಷ್ಣಣ್ಣ, SFI, DYFI, CPIM, ಸಮುದಾಯ ಸಂಘಟನೆಗಳಿಗೆ ಸದಾ ಮಾರ್ಗದರ್ಶನ ನೀಡುತ್ತಿದ್ದರು.
ಕ್ರಷ್ಣಣ್ಣರವರ ಒಂದು ವಿಶೇಷತೆಯೇನೆಂದರೆ ಅವರು CPIMನ ಒಬ್ಬ ಸಾಮಾನ್ಯ ಸದಸ್ಯರು ಮಾತ್ರ. ಆದರೆ ಅವರ ಚಿಂತನೆ, ಆಳವಾದ ಅಧ್ಯಯನ,ಪಕ್ಷದ ಮೇಲಿನ ಅಭಿಮಾನ ಪ್ರೀತಿ, ಬದ್ದತೆ,ಅದಮ್ಯ ಉತ್ಸಾಹ, ಸ್ಪೂರ್ತಿ ಅವರನ್ನು ನಾಯಕತ್ವದ ಸ್ಥಾನಕ್ಕೇರಿಸಿದೆ. ತನ್ನ ಜೀವನದ ಕೊನೆಯ ಉಸಿರಿನವರೆಗೂ ಅವರು ತೋರಿದ ಬದ್ದತೆ, ಮಾಡಿದ ಕೆಲಸಗಳು ಇಂದಿನ ಯುವಜನತೆಗೆ ಸ್ಪೂರ್ತಿಯಾಗಿದೆ. ಕಾಂ.ಕ್ರಷ್ಣ ಶೆಟ್ಟಿಗಾರ್ ರವರು 04-03-2024 ರಂದು ಬೆಳಿಗ್ಗೆ ಖಾಸಗೀ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದರು. ದ.ಕ.ಜಿಲ್ಲೆಗೆ ಹಾಗೂ ಗಡಿನಾಡ ಪ್ರದೇಶ ಮಂಜೇಶ್ವರದ ದುಡಿಯುವ ವರ್ಗದ ಚಳುವಳಿಗೆ ಅಪಾರ ನಷ್ಟವುಂಟಾಗಿದೆ ಎಂದು CPIM ದ.ಕ.ಜಿಲ್ಲಾ ಸಮಿತಿ ತನ್ನ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ತಿಳಿಸಿದೆ.
ಕಾಂ.ಕ್ರಷ್ಣ ಶೆಟ್ಟಿಗಾರ್ ರವರು ಪತ್ನಿ, ಮಗ, ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ನಿಧನಕ್ಕೆ CPIM, CITU,AIKS,DYFI,JMS,SFI ದ.ಕ.ಜಿಲ್ಲಾ ಸಮಿತಿಗಳು, ಸಮುದಾಯ,ದಲಿತ ಆದಿವಾಸಿ ಸಂಘಟನೆಗಳು ತೀವ್ರ ಸಂತಾಪವನ್ನು ವ್ಯಕ್ತ ಪಡಿಸಿದೆ.