ಕಡಬ: ಹಿಂದಿನ 40 ವರ್ಷಗಳಲ್ಲಿ ಜಿಲ್ಲೆಗೆ ಕಾಂಗ್ರೆಸ್ ಸಂಸದರು ನೀಡಿರುವ ಕೊಡುಗೆ ಹಾಗೂ ನಂತರದ 33 ವರ್ಷ ಬಿಜೆಪಿ ಸಂಸದರು ನೀಡಿರುವ ಕೊಡುಗೆಗಳನ್ನು ತುಲನೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ವಿಚಾರ ಅರ್ಥವಾಗುತ್ತದೆ. ಬುದ್ದಿವಂತರ ಜಿಲ್ಲೆ ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕಾಗಿದ್ದು, ಇದಕ್ಕಾಗಿ ಮತದಾರರು ಕಾಂಗ್ರೆಸನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಲಂಕಾರಿನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಪ್ರಾರಂಭವಾದಾಗಿನಿಂದ ಬಿಜೆಪಿ ಸಂಸದರ ಸಾಧನೆ ಬಗ್ಗೆ ಕೇಳುತ್ತಿದ್ದೇವೆ. ಆದರೆ ಇದುವರೆಗೆ ಯಾರೂ ಇದಕ್ಕೆ ಉತ್ತರಿಸಿಲ್ಲ ಎಂದರು. ನಾವೂ ಮೌನವಾದರೆ ಜಿಲ್ಲೆ ಅಭಿವೃದ್ಧಿಯಲ್ಲಿ ಇದೇ ರೀತಿ ಹಿಂದೆ ಬೀಳಲಿದೆ. ಹಾಗಾಗಿ ಪ್ರಚೋದನೆಯ ಮಾತುಗಳಿಗೆ ಒಳಗಾಗದೇ, ಜಾಗೃತರಾಗಿ ಮತ ಚಲಾಯಿಸಬೇಕು. ಈ ಬಾರಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಗರಿಗೆ ಸ್ಪಷ್ಟವಾಗಿ ಅರಿವಾಗಿದೆ. ಅದಕ್ಕಾಗಿ ಅಪಪ್ರಚಾರದ ಮಾರ್ಗ ಹಿಡಿದಿದ್ದಾರೆ. ಮುಂದಿನ ದಿನ ಅಪಪ್ರಚಾರ ಇನ್ನೂ ಹೆಚ್ಚಾಗಬಹುದು. ಎದೆಗುಂದದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು.
ಹೆದ್ದಾರಿ ಅಭಿವೃದ್ಧಿ ಮಾಡುವಾಗ ಸರ್ವಿಸ್ ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂಬ ನಿಯಮವಿದೆ. ಆದರೆ ನಮ್ಮ ಜಿಲ್ಲೆಯಲ್ಲಿ ಮಾತ್ರ ಇದು ಅನುಷ್ಠಾನ ಆಗುತ್ತಿಲ್ಲ. ವಾಹನದಲ್ಲಿ ಸಂಚರಿಸುವುದೆಂದರೆ ಬಹು ತ್ರಾಸದಾಯಕ. ಅದರಲ್ಲೂ ದ್ವಿಚಕ್ರ ವಾಹನದಲ್ಲಿ ತೆರಳುವವರ ಕಷ್ಟ ಹೇಳತೀರದು. ಹೀಗಿದ್ದರೂ ಬಿಜೆಪಿ ಸಂಸದರು ಮೌನವಾಗಿದ್ದಾರೆ. ಆಸ್ಪತ್ರೆಗಳನ್ನು ಮೇಲ್ದರಜೆಗೇರಿಸಲು ಇವರಿಗೆ ಸಾಧ್ಯವಾಗಿಲ್ಲ. ಎಂಡೋ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಆಗಿಲ್ಲ. ಅಡಿಕೆ, ರಬ್ಬರ್ ಮೊದಲಾದ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ನೀಡಲಾಗಿಲ್ಲ ಎಂದರು.
ಇದೇ ಸಂದರ್ಭ ಕೇಶವ ದೇವಾಡಿಗ, ರಮೇಶ್, ಜಗದೀಶ್ ಅವರನ್ನು ಇದೇ ಸಂದರ್ಭ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಸಮಿತಿ ಉಸ್ತುವಾರಿ ಬಿ.ರಮಾನಾಥ ರೈ, ಸುಳ್ಯ ಕೆಪಿಸಿಸಿ ಉಸ್ತುವಾರಿ ಮಮತಾ ಗಟ್ಟಿ, ಸಂಯೋಜಕರಾದ ಶಕುಂತಳಾ ಶೆಟ್ಟಿ, ಜಿ. ಕೃಷ್ಣಪ್ಪ, ಡಾ. ರಘು ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿಯ ಪಿ.ಪಿ. ವರ್ಗೀಸ್, ವೆಂಕಪ್ಪ ಗೌಡ, ಗೋಪಾಲಕೃಷ್ಣ ಪಡ್ಡಿಲ್ಲಾಯ, ಪ್ರವೀಣ್ ಕೆಡೆಂಜಿ, ಕಡಬ ಉಸ್ತುವಾರಿ ಪಿ.ಪಿ. ವರ್ಗೀಸ್, ಕಡಬ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯತೀಸ್ ಕುಮಾರ್ ಬಾನಡ್ಕ, ತಾಪಂ ಮಾಜಿ ಸದಸ್ಯ ಫಝಲ್, ಪ್ರಮುಖರಾದ ಕಿರಣ್ ಬುಡ್ಲೆಗುತ್ತು, ಬಾಲಕೃಷ್ಣ ಬಲ್ಲೇರಿ, ಜಯರಾಜ್, ಗಣೇಶ್ ಕೈಕುರೆ, ಸತೀಶ್ ಕುಮಾರ್ ಕೆಡೆಂಜಿ, ಎನ್.ಎಸ್.ಯು.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝೈನು ಆಲಂಕಾರು ಮೊದಲಾದವರು ಉಪಸ್ಥಿತರಿದ್ದರು. ಸದಾನಂದ ಕುಮಾರ್, ಅಬೂಬಕ್ಕರ್ ನೆಕ್ಕರೆ ಕಾರ್ಯಕ್ರಮ ನಿರೂಪಿಸಿದರು.