ಭೋಪಾಲ್: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಇಂಧೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೆ, ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆ ಮೂಲಕ ಕಾಂಗ್ರೆಸ್ ಗೆ ಮಧ್ಯಪ್ರದೇಶದಲ್ಲೂ ಬಿಜೆಪಿ ಮತ್ತೊಂದು ಶಾಕ್ ನೀಡಿದೆ.
ಅಕ್ಷಯ್ ಕಾಂತಿ ಅವರು ಜಿಲ್ಲಾಧಿಕಾರಿಗೆ ತೆರಳಿ ನಾಮಪತ್ರ ಹಿಂಪಡೆದಿದ್ದಾರೆ. ನಾಮಪತ್ರ ಹಿಂಪಡೆದ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಇದಾದ ಕೆಲವೇ ಹೊತ್ತಿನಲ್ಲಿ ಬಿಜೆಪಿ ಹಿರಿಯ ನಾಯಕ, ಮಧ್ಯಪ್ರದೇಶ ಸರ್ಕಾರದ ಸಚಿವ ಕೈಲಾಶ್ ವಿಜಯವರ್ಗೀಯ ಅವರು ಅಕ್ಷಯ್ ರೊಂದಿಗೆ ಸೆಲ್ಫಿ ತೆಗೆದುಕೊಂಡಿರುವ ಫೊಟೊ ಒಂದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಕ್ಷಯ್ ಬಾಆಮ್ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವಲ್ಲಿ ವಿಜಯವರ್ಗೀಯ ಅವರು ಮಹತ್ವದ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ.
ಗುಜರಾತ್ ನ ಸೂರತ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡು, ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆಗೆ ಕಾರಣವಾಗಿತ್ತು. ಇದೀಗ ಇಲ್ಲೂ ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಹಿಂಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿಯ ಆಯ್ಕೆ ಹಾದಿ ಸುಗಮಗೊಂಡಂತಾಗಿದೆ.