ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಅವರ ಕೃಪಾಪೋಷಿತ ‘ಬಂಟ್ವಾಳ ಕಾಂಗ್ರೆಸ್ ‘ಗೆ ಇವತ್ತು ಎಸ್‌ಡಿಪಿಐನ ದಯೆಯಲ್ಲಿ ಬದುಕುವ ಶೋಚನೀಯ ಪರಿಸ್ಥಿತಿ ಬಂದಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಲೇವಡಿ ಮಾಡಿದ್ದಾರೆ.
ಬಂಟ್ವಾಳದಲ್ಲಿ ಇಂದು ಪುರಸಭಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣಾ ಫಲಿತಾಂಶದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಕ್ಯಾ. ಚೌಟ ಅವರು, “ಕಾಂಗ್ರೆಸ್ ಸಹಜವಾಗಿಯೇ ತನ್ನ ಡಿಎನ್‌ಎಗೆ ಅನುಗುಣವಾಗಿ ಎಸ್‌ಡಿಪಿ ಜತೆಗೆ ಮೈತ್ರಿ ಮಾಡಿಕೊಂಡು ಬಂಟ್ವಾಳ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಗೆದ್ದುಕೊಂಡಿದೆ. ಆ ಮೂಲಕ ಕಾಂಗ್ರೆಸ್ ತಾವು ಯಾರ ಜತೆಗಿದ್ದೇವೆ ಎನ್ನುವ ಸ್ಪಷ್ಟ ಸಂದೇಶವನ್ನು ಸಮಾಜಕ್ಕೆ ರವಾನಿಸಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
” ಕಾಂಗ್ರೆಸ್‌ನ ಸಖ್ಯ ಯಾರ ಜತೆಗಿದೆ ಎಂಬುದನ್ನು ನಾವು ಹಲವಾರು ವರ್ಷಗಳಿಂದ ಹೇಳಿಕೊಂಡು ಬಂದಿದ್ದೇವೆ. ಆದರೆ, ಬಂಟ್ವಾಳದ ಜನತೆಗೆ ಇವತ್ತು ಇದರ ಅರಿವಾಗಿದೆ. ವಿಶೇಷವಾಗಿ ಪಿಎಫ್‌ಐನ ರಾಜಕೀಯ ಸಂಸ್ಥೆಯಾಗಿರುವ ಎಸ್‌ಡಿಪಿಐ ಕಾಂಗ್ರೆಸ್ ಜತೆಗೆ ಖುಲ್ಲಂಖುಲ್ಲಾವಾಗಿ ಹೊಂದಾಣಿಕೆ ಮಾಡಿಕೊಂಡು ಬಂಟ್ವಾಳದ ಮಹಾಜನತೆಗೆ ಮೋಸವನ್ನು ಮಾಡಿರುವ ಕಾಂಗ್ರೆಸ್‌ಗೆ ಈ ಸಂದರ್ಭದಲ್ಲಿ ನಾನು ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ” ಎಂದು ಟೀಕಿಸಿದ್ದಾರೆ