ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರಕ್ಕೆ ಏ.26ರಂದು ಚುನಾವಣೆ ನಡೆದಿದ್ದು, ಜೂ.4ರಂದು ಮತಗಳ ಎಣಿಕೆಗೆ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ವಿದ್ಯಾ ಸಂಸ್ಥೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿದೆ.
ಮತ ಎಣಿಕೆ ಕೇಂದ್ರಕ್ಕೆ ಗುರುತಿನ ಚೀಟಿ ಹೊಂದಿದ ಅಧಿಕಾರಿಗಳು, ಸಿಬ್ಬಂದಿ, ಏಜೆಂಟರು, ಅಭ್ಯರ್ಥಿಗಳಿಗಷ್ಟೇ ಅವಕಾಶವಿದ್ದು ಮೊಬೈಲ್ ಒಯ್ಯುವಂತಿಲ್ಲ. ಎರಡು ಟೇಬಲ್‌ಗಳಿಗೆ ಒಂದು ಸಿಸಿಟಿವಿ ಅಳವಡಿಕೆಯಾಗಲಿದೆ.
ಮತ ಎಣಿಕೆ ಕೇಂದ್ರದಲ್ಲಿ ತಾತ್ಕಾಲಿಕ ಆರೋಗ್ಯ ಸೇವಾ ಕೇಂದ್ರವು ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧಿ, ಸಲಕರಣೆಗಳೊಂದಿಗೆ ಕಾರ್ಯ ನಿರ್ವಹಿಸಲಿದೆ. ಆಂಬ್ಯುಲೆನ್ಸ್ ಸನ್ನದ್ದ ಸ್ಥಿತಿಯಲ್ಲಿರಲಿದ್ದು, ಮೆಸ್ಕಾಂ ಇಲಾಖೆ ನಿರಂತರ ವಿದ್ಯುತ್ ಪೂರೈಕೆ ಮೇಲೆ ನಿಗಾ ಇಡಲಿದೆ. ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆ ಒದಗಿಸಿದ್ದು, 100 ಮೀ. ವ್ಯಾಪ್ತಿಯಲ್ಲಿ ಯಾವುದೇ ವಾಹನ ಪ್ರವೇಶಿಸುವಂತಿಲ್ಲ. ಜೂ.4 ಶುಷ್ಕ ದಿನವಾಗಿದೆ. ಮತ ಎಣಿಕೆಗೆ ಸಂಬಂಧಿಸಿ ದೂರು ಸಲ್ಲಿಸಲು ಇಲ್ಲಾ, ಮಾಹಿತಿ ಪಡೆಯಲು ನಾಗರಿಕರು 1950 ಸಂಪರ್ಕಿಸಬಹುದು.
ಮತ ಎಣಿಕೆ ಪರಿಶೀಲನೆಗೆ ಪ್ರತಿಯೊಬ್ಬ ಅಭ್ಯರ್ಥಿಗೆ ಪ್ರತಿ ಮೇಜಿಗೆ ತಲಾ ಒಬ್ಬರು ಎಣಿಕೆ ಏಜೆಂಟರನ್ನು ನೇಮಿಸಲು ಅವಕಾಶವಿದ್ದು, ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಏಜೆಂಟರಿಗೆ ಪ್ರತ್ಯೇಕ ಬಣ್ಣದ ಪಾಸ್ ನೀಡಲಾಗುವುದು. ಫಲಿತಾಂಶದ ಬಳಿಕ ವಿಜಯೋತ್ಸವ, ಸುಡುಮದ್ದು ನಿಷೇಧಿಸಲಾಗಿದೆ.
ಅಂಚೆ ಮತ ಎಣಿಕೆಗಾಗಿ 16 ಮೇಜುಗಳುಳ್ಳ ಪ್ರತ್ಯೇಕ ಕೊಠಡಿ ವ್ಯವಸ್ಥೆಯಿದ್ದು, ಪ್ರತಿ ಅಂಚೆ ಮತ ಪತ್ರ ಎಣಿಕೆ ಮೇಜಿಗೊಬ್ಬ ಸಹಾಯಕ ಚುನಾವಣಾಧಿಕಾರಿಯನ್ನು ನಿಯೋಜಿಸಲಾಗಿದೆ. ಮಾಧ್ಯಮ ಕೇಂದ್ರ ವ್ಯವಸ್ಥೆಯಿದೆ. ವ್ಯಾಜ್ಯ, ತಕರಾರಿಗೆ ಸಂಬಂಧಿಸಿ ಮತಯಂತ್ರಗಳಲ್ಲಿರುವ ಮತಗಳನ್ನು 45 ದಿನಗಳ ಕಾಲ ಸಂರಕ್ಷಿಸಲಾಗುವುದು.