ಹಮೀರ್‌ಪುರ : ದಂಪತಿಯ ಮಧ್ಯೆ ಗಲಾಟೆಯಾಗಿದ್ದು, ಕೋಪಗೊಂಡ ಪತಿ ಬಾವಿಗೆ ಜಿಗಿದಿದ್ದಾನೆ. ಕೂಡಲೇ ಪತ್ನಿಯೂ ಬಾವಿಗೆ ಹಾರಿ, ತನ್ನ ಗಂಡನ ಪ್ರಾಣ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯ ಕುರಾರಾ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಹನ್ಸ್‌ಕುಮಾರ್ (35) ಎಂಬಾತ ಪತ್ನಿ ಸುನೀತಾ (32) ಜೊತೆಗೆ ಜಗಳವಾಡಿದ ಎಂದು ವರದಿ ತಿಳಿಸಿದೆ.
ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಹನ್ಸ್‌ಕುಮಾರ್ ಮನೆಯ ಸಮೀಪವಿದ್ದ ಬಾವಿಗೆ ಹಾರಿದ್ದಾನೆ. ಆದರೆ ಆತ ಸಹಾಯಕ್ಕಾಗಿ ಜೋರಾಗಿ ಕಿರುಚಲು ಪ್ರಾರಂಭಿಸಿದ್ದಾನೆ.
ಇದನ್ನು ಕೇಳಿ ಬಾವಿಯ ಸುತ್ತೆಲ್ಲಾ ಜನ ಜಮಾಯಿಸಿದ್ದರು. ಆದರೆ, ಯಾರೂ ಕೂಡ ಆತನನ್ನು ರಕ್ಷಿಸುವ ಪ್ರಯತ್ನ ಮಾಡಲಿಲ್ಲ. ಗಲಾಟೆ ಕೇಳಿದ ಸುನೀತಾ ಮನೆಯಿಂದ ಹೊರಗೆ ಓಡಿ ಬಂದು ನೋಡಿದಾಗ ಪತಿ ಬಾವಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.
ತಕ್ಷಣವೇ ಹಗ್ಗವನ್ನು ತನ್ನ ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಇಳಿದು ಪತಿಯನ್ನು ಮೇಲಕ್ಕೆತ್ತಿದ್ದಾಳೆ. ಬಳಿಕ ಆಕೆಯನ್ನು ಮೇಲಕ್ಕೆ ತರಲಾಯಿತು. ಈ ದಂಪತಿಗೆ ಗ್ರಾಮಸ್ಥರು ಸಹಾಯ ಮಾಡಿದರು ಎಂದು ವರದಿಯಿಂದ ತಿಳಿದು ಬಂದಿದೆ.