Saturday, June 14, 2025
Homeನಿಧನಫೇಮಸ್ ಆಗುವ ಹುಚ್ಚು: 100 ಅಡಿ ಎತ್ತರದಿಂದ ಕೆರೆಗೆ ಹಾರಿದ ತರುಣ ಸಾವು: ವೀಡಿಯೋ ವೈರಲ್

ಫೇಮಸ್ ಆಗುವ ಹುಚ್ಚು: 100 ಅಡಿ ಎತ್ತರದಿಂದ ಕೆರೆಗೆ ಹಾರಿದ ತರುಣ ಸಾವು: ವೀಡಿಯೋ ವೈರಲ್

ಸಾಹೀಬ್‌ಗಂಜ್: ಇದು ಸಾಮಾಜಿಕ ಜಾಲತಾಣದ ಯುಗವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕಾಗಿ ಹರೆಯದ ಮಕ್ಕಳು  ಜೀವಕ್ಕೆ ಅಪಾಯ ತರುವಂತಹ ರಿಸ್ಕ್‌ಗಳನ್ನು ಕೂಡ ತೆಗೆದುಕೊಳ್ಳಲು ಮುಂದಾಗುತ್ತಾರೆ. ಕೆಲ ದಿನಗಳ ಹಿಂದಷ್ಟೇ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಾ ಮಧ್ಯರಾತ್ರಿ ಲಾಂಗ್‌ ಡ್ರೈವ್ ಮಾಡಲು ಹೋಗಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡ ಘಟನೆ ಅಹ್ಮದಾಬಾದ್‌ನಲ್ಲಿ ನಡೆದಿತ್ತು. ಆ ಘಟನೆ ಮಾಸುವ ಮೊದಲೇ  ಇನ್ನೊಂದು ಅವಾಂತರ ನಡೆದಿದೆ. ಈಗಷ್ಟೇ ಹರೆಯಕ್ಕೆ ಕಾಲಿರಿಸಿದ 18ರ ತರುಣನೋರ್ವ ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಹೋಗಿ ಸಾವನ್ನಪ್ಪಿದ್ದಾನೆ.

ಕಲ್ಲುಕ್ವಾರಿಯಿಂದ ನಿರ್ಮಾಣವಾದ ಕರೆಯೊಂದಕ್ಕೆ ರೀಲ್ಸ್‌ ಮಾಡುವುದಕ್ಕಾಗಿ 100 ಅಡಿ ಎತ್ತರದಿಂದ ಹುಡುಗ ಹಾರಿದ್ದು, ಜೀವ ಕಳೆದುಕೊಂಡಿದ್ದಾನೆ. ನೀರಿಗೆ ಜಿಗಿದ ಗಂಟೆಗಳ ನಂತರ ಆತನ ಶವ ಪತ್ತೆಯಾಗಿದೆ. ಮೃತ ಯುವಕನನ್ನು ತೌಸೀಫ್ ಎಂದು ಗುರುತಿಸಲಾಗಿದೆ. ಜಾರ್ಖಂಡ್‌ನ ಸಾಹೀಬ್‌ಗಂಜ್‌ನಲ್ಲಿ ಈ ಅವಘಡ ನಡೆದಿದೆ. 

ತೌಸೀಫ್ ತನ್ನ ಸ್ನೇಹಿತರ ಜೊತೆ ಮೇ 20 ರಂದು ಕಲ್ಲು ಕ್ವಾರಿಯಿಂದ ನಿರ್ಮಾಣವಾದ ಕೆರೆಗೆ ಈಜಾಡಲು ಹೋಗಿದ್ದಾನೆ. ಈ ವೇಳೆ ಇನ್ಸ್ಟಾ ರೀಲ್ಸ್‌ಗಾಗಿ ಈತ ನೂರು ಅಡಿ ಎತ್ತರದಿಂದ ಕೆಳಗೆ ಹಾರಿದ್ದು, ಮುಳುಗಿದ್ದಾನೆ. ಸ್ನೇಹಿತರು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡುತ್ತಿದ್ದರೆ ಈತ 100 ಅಡಿ ಎತ್ತರದಿಂದ ಕೆರೆಗೆ ಹಾರಿದ್ದಾನೆ. ಈ ವೀಡಿಯೋ ಸ್ವಲ್ಪ ಹೊತ್ತಿನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೇನು ಬಂತು ಈತನ ಜೀವವೇ ಹೊರಟು ಹೋಗಿದೆ. ಸ್ನೇಹಿತರು ಈತನನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ, 

ಘಟನೆಗೆ ಸಂಬಂಧಿಸಿದಂತೆ ಡಿಎಸ್‌ಪಿ ವಿಜಯ್‌ ಕುಮಾರ್ ಕುಶ್ವಾಹ್ ಮಾತನಾಡಿದ್ದು, ಮೇಲಿಂದ ಬಿದ್ದ ರಭಸಕ್ಕೆ ಈತ ಸೀದಾ ಕೆರೆಯ ಆಳಕ್ಕೆ ಹೋಗಿದ್ದು, ಮೇಲೆ ಬರಲಾಗದೇ ಮುಳುಗಿದ್ದಾನೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅವಿವೇಕಿ ತರುಣರು ಫೇಮಸ್ ಆಗುವ ಭರದಲ್ಲಿ ಜೀವವನ್ನು ಪಣಕ್ಕಿಟ್ಟು ಸಾಹಸಕ್ಕೆ ಕೈ ಹಾಕುತ್ತಿದ್ದು, ಇದರಿಂದ ಪೋಷಕರು ಮಕ್ಕಳನ್ನು ಕಳೆದುಕೊಂಡು ಮರುಗುವಂತಾಗಿದೆ. 

RELATED ARTICLES
- Advertisment -
Google search engine

Most Popular