Thursday, May 1, 2025
Homeಮಂಗಳೂರುನಿರಂತರ ಅಧ್ಯಯನದಿಂದ ಸತ್ವ ಪೂರ್ಣ ಸಾಹಿತ್ಯ ಸೃಷ್ಟಿ: ರಾ. ಶಿರೂರು

ನಿರಂತರ ಅಧ್ಯಯನದಿಂದ ಸತ್ವ ಪೂರ್ಣ ಸಾಹಿತ್ಯ ಸೃಷ್ಟಿ: ರಾ. ಶಿರೂರು

ಕವಿಯಾದವನು ಭಾವ ಪ್ರಪಂಚದಲ್ಲಿ ವಿಹರಿಸುತ್ತಾ ಇರುತ್ತಾನೆ. ನಿರಂತರ ಅಧ್ಯಯನ ಮಾಡುವುದರ ಮೂಲಕ ಕವಿಗೆ ಸತ್ವಪೂರ್ಣ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ ಎಂದು ಮೂಡುಬಿದಿರೆಯ ಅಧ್ಯಾಪಕ-ಕವಿ – ಸಾಹಿತಿ ಡಾ.ರಾಮಕೃಷ್ಣ ಶಿರೂರು ತಿಳಿಸಿದರು.

ದಾವಣಗೆರೆಯ ರೋಟರಿ ಬಾಲ ಭವನದಲ್ಲಿ ನಡೆದ ಕಾವ್ಯ ಕುಂಚ ಭಾಗ – ೫ ಕವನ ಸಂಕಲನ ಮತ್ತು ಲೇಖನಗಳ ಸಂಗ್ರಹ ಕುಂಚ ಕೈಪಿಡಿಯ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಕಾವ್ಯ ಸೃಷ್ಟಿಯ ಕುರಿತು ಮಾತನಾಡಿದರು.

ಕಾವ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳನ್ನು ಅಧ್ಯಯನ ಮಾಡುವುದು ಅವಶ್ಯ. ಕನ್ನಡ ಕಾವ್ಯ ಪರಂಪರೆಯ ಬಗ್ಗೆ ಮತ್ತು ಕವಿಪರಂಪರೆಯ ಬಗ್ಗೆ ತಿಳಿದುಕೊಂಡಿರಬೇಕು. ಹೀಗೆ ಕಾವ್ಯದ ಓದಿನ ವಿಸ್ತಾರದಿಂದ ಪರಿಪೂರ್ಣ ಕಾವ್ಯ ನಿರ್ಮಾಣಗೊಳ್ಳುತ್ತದೆ. ಕಾವ್ಯ ಪ್ರಕಾರಗಳಾದ ಚಂಪೂ, ಕಂದಪದ್ಯ, ಷಟ್ಪದಿ, ರಗಳೆ, ಸಾಂಗತ್ಯ, ತ್ರಿಪದಿ ಮತ್ತು ಹೊಸಗನ್ನಡದ ಛಂದೋ ಪ್ರಕಾರಗಳನ್ನು ತಿಳಿದುಕೊಳ್ಳುವುದರಿಂದ ನಮ್ಮ ಭಾವ ಪ್ರಪಂಚ ವಿಸ್ತಾರ ಗೊಳ್ಳುತ್ತದೆ.ಪಂಪ, ರನ್ನ, ಜನ್ನ, ರಾಘವಾಂಕ, ಹರಿಹರ, ಕುಮಾರವ್ಯಾಸ,ಲಕ್ಷ್ಮೀಶ ಮುಂತಾದ ಹಳೆಗನ್ನಡದ ಕವಿಗಳ ಬಗ್ಗೆ ಮತ್ತು ಬಿ. ಎಂ. ಶ್ರೀಕಂಠಯ್ಯ, ಕುವೆಂಪು, ದ.ರಾ. ಬೇಂದ್ರೆ, ಜಿ. ಎಸ್. ಶಿವರುದ್ರಪ್ಪ ಮುಂತಾದವರ ಕವನಗಳನ್ನು ಅಧ್ಯಯನ ಮತ್ತು ಅವಲೋಕನ ಮಾಡುವುದರ ಮೂಲಕ ನಮ್ಮ ಭಾವ ಪ್ರಪಂಚವನ್ನು ವಿಸ್ತರಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾವ್ಯ ಕುಂಚ ಭಾಗ- ೫ರ ಲೋಕಾರ್ಪಣೆಯನ್ನು ರಾಯಚೂರಿನ ಶ್ರೀ ನಾನಾ ಗೌಡ ಮಾಲಿ ಪಾಟೀಲ್ ಅವರು ಕಾವ್ಯ ಕುಂಚ ಭಾಗ-5ನ್ನು ಲೋಕಾರ್ಪಣೆಗೊಳಿಸಿದರು.
ಕಾವ್ಯ ಕುಂಚ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಾಲಿಗ್ರಾಮ ಗಣೇಶ್ ಶೆಣೈ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಂತರ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ಕವಿಗಳಿಂದ ರಾಜ್ಯಮಟ್ಟದ ಕವಿಗೋಷ್ಠಿ ಸಂಪನ್ನಗೊಂಡಿತು.

RELATED ARTICLES
- Advertisment -
Google search engine

Most Popular