ಆಲಿಗಢ: ಪೊಲೀಸ್ ಠಾಣೆ ಆವರಣದಲ್ಲೇ ಸ್ವಂತ ತಾಯಿಗೆ ಬೆಂಕಿ ಹಚ್ಚಿ, ಸಂಬಂಧಿ ಜೊತೆಗಿನ ಜಮೀನು ವಿವಾದದಿಂದ ಆಕೆಯೇ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಬಿಂಬಿಸಲು ಮಗನೊಬ್ಬ ಯತ್ನಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಆಲಿಗಢದಲ್ಲಿ ಈ ಘಟನೆ ನಡೆದಿದೆ.
ಯುವಕನ ಕೃತ್ಯ ವಿಡಿಯೊದಲ್ಲಿ ದಾಖಲಾಗಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಯುವಕನೇ ತನ್ನ ತಾಯಿಗೆ ಬೆಂಕಿ ಹಚ್ಚುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ. ಖೈರ್ ಪೊಲೀಸ್ ಠಾಣಾ ಆವರಣದಲ್ಲಿ ಮಂಗಳವಾರ ಈ ಘಟನೆ ನಡೆದಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿ ಮಹಿಳೆ ಮತ್ತು ಆಕೆಯ ಮಗ ಪೊಲೀಸರ ಮೊರೆ ಹೋಗಿದ್ದರು. ಸ್ವಲ್ಪ ಸಮಯದ ನಂತರ, ಮಹಿಳೆ ಮತ್ತು ಆಕೆ ಠಾಣೆಯಿಂದ ಹೊರಗೆ ಬಂದು ಠಾಣೆಯ ಆವರಣದೊಳಗಿನ ನಿರ್ಜನ ಪ್ರದೇಶಕ್ಕೆ ತೆರಳಿದರು. ಅಲ್ಲಿ ಮಹಿಳೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಲು ಆರಂಭಿಸಿದಳು. ಮಹಿಳೆ ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದಾಗ ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ಕಡೆಗೆ ಓಡಿ ಹೋಗಿ ಆಕೆಯ ಕೈ ಹಿಡಿದುಕೊಂಡರು. ಈ ಘಟನಾವಳಿಗಳನ್ನು ಮಗ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದುದು ವಿಡಿಯೋ ತೋರಿಸುತ್ತದೆ. ತಾಯಿ ಬೆಂಕಿ ಹಚ್ಚಿಕೊಳ್ಳುವುದನ್ನು ಪೊಲೀಸ್ ಅಧಿಕಾರಿ ತಡೆಯುತ್ತಿರುವುದನ್ನು ನೋಡಿದ ಮಗ ಲೈಟರ್ ಬಳಸಿ ತಾನೇ ಬೆಂಕಿ ಹಚ್ಚಿರುವುದು ವಿಡಿಯೊದಲ್ಲಿ ದಾಖಲಾಗಿದೆ.