ಫೋರ್ಚುಗಲ್‌ನ ಪ್ರಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊಗೆ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಫುಟ್ಬಾಲ್ ಪ್ರೇಮಿಗಳ ಫೇವರಿಟ್ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಪಂದ್ಯಾಟದಲ್ಲಿ ಹೇಗೆ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಾ ಬಂದಿದ್ದಾರೋ, ಅದೇ ರೀತಿ ಈಗ ಹೊಸ ದಾಖಲೆಗಳನ್ನು ಬರೆಯಲು ಮುಂದಾಗಿದ್ದಾರೆ. ಫುಟ್ಬಾಲ್ ಆಟದ ಮೂಲಕ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿರುವ ಕ್ರಿಸ್ಟಿಯಾನೊ ರೊನಾಲ್ಡೊ ಈಗ ಯೂಟ್ಯೂಬ್ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೇ ಮೊದಲ ಬಾರಿಗೆ ಯೂ ಟ್ಯೂಬ್ ಚಾನೆಲ್ ಆರಂಭಿಸಿರುವ ಕ್ರಿಸ್ಟಿಯಾನೊ, ತಮ್ಮ ಚಾನೆಲ್‌ಗೆ ಅಭಿಮಾನಿಗಳನ್ನು ಪಡೆಯುವಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಅವರ ನೂತನ ಯೂಟ್ಯೂಬ್ ಚಾನೆಲ್ ಆರಂಭವಾದ ಕೇವಲ 90 ನಿಮಿಷ ಅಂದರೆ ಒಂದೂವರೆ ಗಂಟೆಯಲ್ಲಿ 10 ಲಕ್ಷ ಚಂದಾದಾರನ್ನು ಗಳಿಸಿದ್ದಾರೆ. ಅಲ್ಲದೆ ಕೇವಲ 12 ಗಂಟೆಗಳಲ್ಲಿ 100 ಲಕ್ಷ ಅಂದರೆ ಬರೋಬ್ಬರಿ 1 ಕೋಟಿ ಚಂದಾದಾರರನ್ನು ರೊನಾಲ್ಡೊ ಅವರ ಚಾನೆಲ್ ಗಳಿಸಿದೆ. ಆ ಮೂಲಕ ಅತಿ ಕಡಿಮೆ ಅವಧಿಯಲ್ಲಿ 1 ಕೋಟಿ ಚಂದಾದಾರರನ್ನು ಹೊಂದಿರುವ ಯೂ ಟ್ಯೂಬರ್ ಎಂಬ ದಾಖಲೆಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ಬರೆದಿದ್ದಾರೆ. ಕೇವಲ ಒಂದೇ ದಿನದೊಳಗೆ ಅವರು ಇಷ್ಟೊಂದು ದಾಖಲೆಗಳನ್ನು ಬರೆದಿದ್ದಾರೆ.
ಆ.21ರಂದು ತಾವು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿರುವ ಬಗ್ಗೆ ಅವರು ಘೋಷಿಸಿದ್ದರು. ಇದಾದ ಬಳಿಕ ಯುಆರ್ ಕ್ರಿಸ್ಟಿಯಾನೊ ಚಾನೆಲ್ ಆರಂಭವಾದುದೇ ತಡ, ಚಂದಾದಾರರ ಸಂಖ್ಯೆ ನಾಗಾಲೋಟದಲ್ಲಿ ಓಡಿದೆ. ಒಂದೇ ದಿನಕ್ಕೆ ಯೂ ಟ್ಯೂಬ್‌ನಿಂದ ಡೈಮಂಡ್ ಬಟನ್ ಪಡೆದ ಯೂಟ್ಯೂಬರ್ ಆಗಿ ಕ್ರಿಸ್ಟಿಯಾನೊ ರೊನಾಲ್ಡೊ ಹೊರಹೊಮ್ಮಿದ್ದಾರೆ.
ವಿಡಿಯೋ ವೀಕ್ಷಿಸಲು ಲಿಂಕ್ ಕ್ಲಿಕ್ ಮಾಡಿ…
