ಸುಳ್ಯ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಶಾಲಿನಿ ರಜನೀಶ್ ಗೋವಿನ ಮೇಲಿನ ತಮ್ಮ ವಿಶೇಷ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಸುಳ್ಯದಿಂದ ಮಲೆನಾಡು ಗಿಡ್ಡ ತಳಿಯ ಗೋವುಗಳನ್ನು ಬೆಂಗಳೂರಿಗೆ ಕೊಂಡೊಯ್ದು ಸ್ವತಃ ಸಾಕುವುದಾಗಿ ತಿಳಿಸಿ ಮಾದರಿಯಾಗಿದ್ದಾರೆ.
ಮಲೆನಾಡು ಗಿಡ್ಡ ತಳಿಯ ಎರಡು ತಾಯಿ, ಎರಡು ಕರು ಒಟ್ಟು ನಾಲ್ಕು ಗೋವುಗಳನ್ನು ಅವರು ಕೊಂಡೊಯ್ದಿದ್ದು, ಬೆಂಗಳೂರಿನ ತಮ್ಮ ನಿವಾಸದಲ್ಲಿ ಗೋವು ಪೂಜೆ ನಡೆಸಿ, ಬರಮಾಡಿಕೊಂಡಿದ್ದಾರೆ.
ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಅಲೆಕ್ಕಾಡಿ ಸಮೀಪದ ಕೃಷಿಕ ಅಕ್ಷಯ್ ಆಳ್ವ ಅವರ ಮನೆಯಿಂದ ಈ ಗೋವುಗಳನ್ನು ಕೊಂಡೊಯ್ಯಲಾಗಿದೆ. ಶಾಲಿನಿ ರಜನೀಶ್ ಅವರು ಮಲೆನಾಡು ಗಿಡ್ಡ ತಳಿಯ ಗೋವು ಸಾಕಲು ಮುಂದಾಗಿದ್ದರು. ಕಡಬದ ಕೊಯಿಲ ಪಶುಸಂಗೋಪನಾ ಇಲಾಖೆ ನಿರ್ದೇಶಕ ಪ್ರಸನ್ನ ಹೆಬ್ಬಾರ್ ಮೂಲಕ ಮಾಹಿತಿ ಪಡೆದು ಅಕ್ಷಯ್ ಆಳ್ವರನ್ನು ಸಂಪರ್ಕಿಸಿದ್ದಾರೆ. ಅಕ್ಷಯ್ ತಮ್ಮ ಷರತ್ತುಗಳನ್ನು ತಿಳಿಸಿದ್ದಾರೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಶಾಲಿನಿ ರಜನೀಶ್ ಅವರಿಗೆ ಮಲೆನಾಡು ಗಿಡ್ಡ ತಳಿಯ ನಾಲ್ಕು ಗೋವುಗಳನ್ನು ಹಸ್ತಾಂತರಿಸಿದ್ದಾರೆ.
ಸ್ವತಃ ಶಾಲಿನಿ ರಜನೀಶ್ ಅವರೇ ಮನೆಯವರೊಂದಿಗೆ ಈ ಗೋವುಗನ್ನು ಸಾಕಿ ಸಲಹಲಿದ್ದಾರೆ. ಅದಕ್ಕಾಗಿಯೇ ಅವರು ಹಟ್ಟಿಯನ್ನೂ ನಿರ್ಮಿಸಿದ್ದಾರೆ. ಅಕ್ಷಯ್ ಬಳಿಯಿಂದ ಹಸುವನ್ನು ಕರೆದೊಯ್ಯುವಾಗ ಹಂಸಿ ಎಂಬ ಗೋವು ಕಣ್ಣೀರಿಟ್ಟ ಪ್ರಸಂಗವೂ ನಡೆಯಿತು ಎನ್ನಲಾಗಿದೆ. ಇಲಾಖೆಯ ನಿಯಮಾವಳಿಯಂತೆ ಗೋವು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ, ಅವುಗಳನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.