ಬೆಂಗಳೂರು: ಸೈಬರ್ ವಂಚನೆಯ ಸುದ್ದಿ ದಿನನಿತ್ಯ ಕೇಳುತ್ತಿರುತ್ತೇವೆ. ಬೇರೆ ಬೇರೆ ರೀತಿಯಲ್ಲಿ ಸೈಬರ್ ವಂಚನೆ ಎಸಗುತ್ತಿದ್ದ ವಂಚಕರು ಈಗ ಹೊಸ ಮಾದರಿಯ ವಂಚನೆಗಿಳಿದಿದ್ದಾರೆ. ರಿಜಿಸ್ಟರ್ಡ್ ಪೋಸ್ಟ್ ಒಂದನ್ನು ಕಳುಹಿಸಿ, ಆ ಮೂಲಕ ನಂಬಿಸುವ ಜಾಲವೊಂದು ಕಾರ್ಯಾಚರಣೆ ನಡೆಸುತ್ತಿದೆ.
ಭಾರತೀಯ ಅಂಚೆ ಇಲಾಖೆಯ ರಿಜಿಸ್ಟರ್ಡ್ ಪೋಸ್ಟ್ ಮೂಲಕ ನಿಮ್ಮ ಮನೆಗೆ ಪೋಸ್ಟ್ ಬರುತ್ತದೆ. ಲಕೋಟೆಯೊಳಗೆ ಭಾರತ ಸರ್ಕಾರದ ಲಾಂಛನವಿರುವ ಕೂಪನ್ ಇರುತ್ತದೆ. ಅಥವಾ ಯಾವುದಾದರೂ ದೊಡ್ಡ ಕಂಪೆನಿಯ ಕೂಪನ್‌ಗಳೂ ಇರಬಹುದು. ಕೂಪನ್ ಜೊತೆಗೆ ಅಪ್ಲಿಕೇಶನ್ ಫಾರ್ಮ್ ಕೂಡ ಇರುತ್ತದೆ. ಕೂಪನ್ ಮೇಲೆ ಸ್ಕ್ರಾಚ್ ಮಾಡಿದರೆ ವಾಹನ ಅಥವಾ ದೊಡ್ಡ ಮೊತ್ತದ ಉಡುಗೊರೆ ಗೆಲ್ಲುವ ಬಗ್ಗೆ ಬರೆದಿರುತ್ತದೆ.
ಅದನ್ನು ಸ್ಕ್ರಾಚ್ ಮಾಡಿದರೆ ನೀವು 12, 15 ಲಕ್ಷ ಹಣ ಗೆದ್ದಿದ್ದೀರಿ. ಒಂದು ಎಸ್‌ಎಂಎಸ್ ಕೋಡ್ ಕೂಡ ಇರುತ್ತದೆ. ಆ ಕೋಡ್ ಬಳಸಿದರೆ ನಿಮ್ಮ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಸೈಬರ್ ವಂಚಕರ ಪಾಲಾಗುತ್ತದೆ. ಕೆಲವು ಪತ್ರಗಳಲ್ಲಿ ಸ್ಕಾನರ್ ಹಾಗೂ ನಂಬರ್‌ಗಳನ್ನೂ ನೀಡಲಾಗಿರುತ್ತದೆ. ಅದನ್ನು ನಂಬಿ ಸ್ಕಾನ್ ಮಾಡಿದರೆ ಅಥವಾ ಕರೆ ಮಾಡಿದರೆ ನಿಮ್ಮ ಖಾತೆಯ ಹಣ ವಂಚಕರ ಪಾಲಾಗುತ್ತದೆ. ಈ ಹೊಸ ವಿಧಾನದಿಂದ ಸಾಕಷ್ಟು ಮಂದಿಗೆ ಪೋಸ್ಟ್ ಬಂದಿದೆ. ಹೀಗಾಗಿ ಯಾವುದೇ ರಿಜಿಸ್ಟರ್ಡ್ ಪೋಸ್ಟ್ ಈ ರೀತಿಯಲ್ಲಿ ಬಂದರೆ ಎಚ್ಚರದಿಂದ ವ್ಯವಹರಿಸಬೇಕು ಎಂದು ಈ ಬಗ್ಗೆ ಪೊಲೀಸರೂ ಮನವಿ ಮಾಡಿದ್ದಾರೆ.