ಡಾನಾ ಚಂಡಮಾರುತ | 14 ಜಿಲ್ಲೆಗಳಲ್ಲಿ ಶಾಲೆಗಳು ಬಂದ್, 800 ಪರಿಹಾರ ಕೇಂದ್ರ ಸ್ಥಾಪನೆ, ಒಡಿಶಾ-ಬಂಗಾಳದಲ್ಲಿ ಫುಲ್ ಅಲರ್ಟ್
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಗುರುವಾರ ಬಂಗಾಳಕೊಲ್ಲಿ ತೀರ ಪ್ರದೇಶಗಳಿಗೆ ʻಡಾನಾʼ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಮುಂಗಾರು ಮಳೆ ಋತುವಿನ ನಂತರ ಉಷ್ಣವಲಯದ ಮೊದಲ ಚಂಡಮಾರುತ ಇದಾಗಿದೆ.
ಪೂರ್ವ– ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಇದು ಪಶ್ಚಿಮ– ವಾಯುವ್ಯ ದಿಕ್ಕಿನೆಡೆಗೆ ಚಲಿಸಿ ಬುಧವಾರದ ವೇಳೆಗೆ ಅಂದ್ರೆ ಅಕ್ಟೋಬರ್ 23ರ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅಕ್ಟೋಬರ್ 24ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ಉತ್ತರ ಬಂಗಾಳ ಕೊಲ್ಲಿಯ ತೀರ ಪ್ರದೇಶಕ್ಕೆ ಅಪ್ಪಳಿಸಲಿದೆ. ವಾಯುವ್ಯ ದಿಕ್ಕಿಗೆ ಚಲಿಸಲಿರುವ ಈ ಚಂಡಮಾರುತ ಗುರುವಾರ (ಅ.24) ರಾತ್ರಿ ಅಥವಾ ಶುಕ್ರವಾರ (ಅ.25) ಮುಂಜಾನೆ ಒಡಿಶಾದ ಪುರಿಗೆ ಅಪ್ಪಳಿಸಲಿದೆ. ಈ ವೇಳೆ ಗಾಳಿಯ ವೇಗ ಗಂಟೆಗೆ 100 ರಿಂದ 120 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗಲಿದೆ. ಅಕ್ಟೋಬರ್ 23 ರಿಂದಲೇ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಗಂಟೆಗೆ 90 ರಿಂದ 120 ಕಿಮಿ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಇದನ್ನು ತೀವ್ರ ಚಂಡಮಾರುತ ಎಂದು ವರ್ಗೀಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಡಿಶಾ ಮತ್ತು ಬಂಗಾಳದಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹಲವೆಡೆ ಶಾಲಾ ಕಾಲೇಜುಗಳಿಗೆ ಸಂಪೂರ್ಣ ರಜೆ ಘೋಷಣೆ ಮಾಡಲಾಗಿದೆ. ಚಂಡಮಾರುತವನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಸಕಲ ತಯಾರಿ ಮಾಕೊಳ್ಳುತ್ತಿದೆ.
ಚಂಡಮಾರುತ ಎದುರಿಸಲು ಒಡಿಶಾ ಸರ್ಕಾರ ಕೈಗೊಂಡಿರುವ ಕ್ರಮಗಳೇನು?
- ಪ್ರವಾಸಿಗಳು ಮತ್ತು ಯಾತ್ರಾರ್ಥಿಗಳಿಗೆ ಅಕ್ಟೋಬರ್ 23ಕ್ಕೆ ಮುಂಚಿತವಾಗಿ ಪುರಿಯಿಂದ ಹೊರಡುವಂತೆ ಸೂಚನೆ ನೀಡಲಾಗಿದೆ.
- ಅ.23 ರಿಂದ 25ರ ವರೆಗೆ ಮುನ್ನೆರಿಕಾ ಕ್ರಮವಾಗಿ 14 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
- ಅಕ್ಟೋಬರ್ 23 ರಿಂದ 25ರ ವರೆಗೆ ಎಲ್ಲಾ ರಕ್ಷಣಾ ಸಿಬ್ಬಂದಿಗೆ ರಜೆ ಕಡಿತಗೊಳಿಸಿದೆ
- ಅಣುಕು ಕಾರ್ಯಾಚರಣೆ ಮೂಲಕ ಜಾಗೃತಿ ಮೂಡಿಸುತ್ತಿದೆ
- ಡಾನಾ ಚಂಡಮಾರುತಕ್ಕೆ ತುತ್ತಾಗುವ ಸಂಭಾವ್ಯ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
- 10 ಜಿಲ್ಲೆಗಳಲ್ಲಿ ಒಟ್ಟು 17 ಒಡಿಆರ್‌ಎಎಫ್ ತಂಡಗಳನ್ನು ನಿಯೋಜಿಸಲು ಮುಂದಾಗಿದೆ. ಜೊತೆಗೆ ಮೂರು ODRAF ತಂಡಗಳನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗುತ್ತಿದೆ.
- ಪಶ್ಚಿಮ ಬಂಗಾಳದಲ್ಲೂ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಸೇನೆಯ ರಕ್ಷಣಾ ತಂಡ, ಕೋಸ್ಟ್ ಗಾರ್ಡ್ ತಂಡಗಳೂ ಫೀಲ್ಡಿಗಿಳಿದಿವೆ.
