ನವದೆಹಲಿ: ಬಹುನಿರೀಕ್ಷಿತವಾಗಿರುವ 55ನೇ ಜಿಎಸ್ಟಿ ಮಂಡಳಿ ಸಭೆ ಈ ತಿಂಗಳು ನಡೆಯುವುದಿಲ್ಲ. ಮುಂದಿನ ತಿಂಗಳು ರಾಜಸ್ಥಾನದ ಜೈಸಲ್ಮೇರ್ನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ. ಇವುಗಳ ಪ್ರಕಾರ ಡಿಸೆಂಬರ್ 21ರಂದು ಸಭೆ ನಡೆಯಬಹುದು. ನವೆಂಬರ್ನಲ್ಲಿ ಸಭೆ ನಡೆಯಬೇಕಿತ್ತಾದರೂ ಮಹಾರಾಷ್ಟ್ರ ಮತ್ತು ಜಾರ್ಖಂಡ್ನಲ್ಲಿ ವಿಧಾನಸಭಾ ಚುನಾವಣೆಗಳು ಇರುವುದರಿಂದ ಹಾಗೂ ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನವೂ ನಡೆಯುವುದರಿಂದ ಸಭೆಯನ್ನು ಮುಂದೂಡಲಾಗಿರುವುದು ತಿಳಿದುಬಂದಿದೆ.
ಡಿಸೆಂಬರ್ 21ರಂದು ಜಿಎಸ್ಟಿ ಕೌನ್ಸಿಲ್ ಸಭೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಆ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಕೇಂದ್ರ ಬಜೆಟ್ ತಯಾರಿ ನಡೆಯುತ್ತಿರುವುದರಿಂದ ರಾಜ್ಯಗಳ ಅಭಿಪ್ರಾಯಗಳು, ಶಿಫಾರಸುಗಳನ್ನು ಪಡೆಯುವುದು ಜಿಎಸ್ಟಿ ಕೌನ್ಸಿಲ್ ಸಭೆಯ ಪ್ರಮುಖ ಅಜೆಂಡಾ ಆಗಿದೆ.
ಯಾವ್ಯಾವ ಸರಕುಗಳಿಗೆ ಜಿಎಸ್ಟಿ ದರಗಳನ್ನು ಬದಲಾಯಿಸಬಹುದು ಎನ್ನುವ ಸಲಹೆಗಳನ್ನು ಈ ಸಭೆಯಲ್ಲಿ ಕೇಳಲಾಗುವುದು. ಬಹಳ ಅವಶ್ಯಕ ವಸ್ತುಗಳ ಜಿಎಸ್ಟಿ ದರ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡುವ ಕಡೆಗೆ ಆದ್ಯತೆ ಕೊಡಲಾಗುತ್ತದೆ. ಹಾಗೆಯೇ, ಲಕ್ಷುರಿ ಎನಿಸುವ ವಸ್ತುಗಳಿಗೆ ತೆರಿಗೆ ದರ ಹೆಚ್ಚಿಸಲಾಗಬಹುದು. ಈ ವಿಚಾರದಲ್ಲಿ ಎಲ್ಲಾ ರಾಜ್ಯಗಳ ಹಣಕಾಸು ಸಚಿವರ ಶಿಫಾರಸುಗಳನ್ನು ಆಲಿಸಿ ಅವುಗಳ ಆಧಾರದ ಮೇಲೆ ಜಿಎಸ್ಟಿ ದರ ಪರಿಷ್ಕರಣೆ ನಡೆಸಲಾಗುವುದು.
ಸದ್ಯ ಜಿಎಸ್ಟಿ ವ್ಯವಸ್ಥೆಯಲ್ಲಿ ನಾಲ್ಕು ಸ್ತರದ ತೆರಿಗೆ ದರಗಳಿವೆ. ಶೇ. 5, ಶೇ. 12, ಶೇ. 18 ಮತ್ತು ಶೇ 28ರ ಸ್ಲ್ಯಾಬ್ಗಳಿವೆ. ತೀರಾ ಅಗತ್ಯ ಇರುವ ವಸ್ತುಗಳು ಶೇ. 5ರ ಟ್ಯಾಕ್ಸ್ ಸ್ಲ್ಯಾಬ್ಗೆ ಬರುತ್ತವೆ. ಲಕ್ಷುರಿ ಎನಿಸುವ ವಸ್ತುಗಳಿಗೆ ಶೇ. 28ರಷ್ಟು ತೆರಿಗೆ ವಿಧಿಸುವ ಪರಿಪಾಟ ಇದೆ.
ಹಾಗೆಯೇ 55ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಇನ್ಷೂರೆನ್ಸ್ ಪ್ರೀಮಿಯಮ್ಗೆ ಜಿಎಸ್ಟಿ ಇಳಿಸುವ ಅಥವಾ ತೆಗೆದುಹಾಕುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಈ ಬಗ್ಗೆ ಸಲಹೆ ನೀಡಲು ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ಗ್ರೂಪ್ ಆಫ್ ಮಿನಿಸ್ಟರ್ಸ್ ಅನ್ನು ರಚಿಸಿತ್ತು. ಬಿಹಾರದ ಹಣಕಾಸು ಸಚಿವರ ನೇತೃತ್ವದ ಈ ಸಚಿವರ ಗುಂಪಿನಲ್ಲಿ ಕರ್ನಾಟಕದ ಕಂದಾಯ ಸಚಿವ ಕೃಷ್ಣಬೈರೇಗೌಡ ಮೊದಲಾದವರು ಇದ್ದಾರೆ.