ಬೆಳ್ತಂಗಡಿ: ತುಳುನಾಡಿನ ಹಿರಿಯ ಜನಪರ ದಲಿತ ನಾಯಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ)ಯ ರಾಜ್ಯ ಮುಖಂಡ ಎಲ್. ಚಂದು ನಿಧನರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದ ಬಳಿಕ ಅವರು ಬುಧವಾರ ರಾತ್ರಿ ನಿಧನರಾದರೆಂದು ತಿಳಿದುಬಂದಿದೆ. ಮೃತರ ಅಂತ್ಯ ಸಂಸ್ಕಾರ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿನ್ನಿಕಲ್ಲುವಿನ ಅವರ ನಿವಾಸದಲ್ಲಿ ನಡೆಸಲಾಗುವುದು ಎಂದು ಸಂಘಟನೆ ಮೂಲಗಳು ತಿಳಿಸಿವೆ. ಅಂತ್ಯ ಸಂಸ್ಕಾರಕ್ಕೂ ಮೊದಲು ಮೃತರ ಸಾರ್ವಜನಿಕ ಅಂತಿಮ ದರ್ಶನಕ್ಕೆ ಇಂದು (ಗುರುವಾರ) ಬೆಳಿಗ್ಗೆ 10 ಗಂಟೆಯಿಂದ 12 ಗಂಟೆ ವರೆಗೆ ಲಾಯಿಲದ ಪಡ್ಲಾಡಿ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಹೋರಾಟದ ಬದುಕನ್ನೇ ರೂಢಿಸಿಕೊಂಡಿದ್ದ ಎಲ್. ಚಂದುರವರು ತುಳುನಾಡಿನ ಮುಂಚೂಣಿಯ ಅಂಬೇಡ್ಕರ್‍ವಾದಿ ನಾಯಕರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದದ ರಾಜ್ಯ ಸಂಘಟನಾ ಸಂಚಾಲಕರಾಗಿದ್ದ ಅವರು ರಾಜ್ಯದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಕಾಂಗ್ರೆಸ್ ಮುಖಂಡರೂ ಆಗಿದ್ದ ಅವರು ಬೆಳ್ತಂಗಡಿ ತಾಲೂಕು ಪಂಚಾಯತಿಯ ಮಾಜಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅತಿ ಕಿರಿಯ ವಯಸ್ಸಿನಲ್ಲೇ ದಲಿತ ಸಂಘರ್ಷ ಸಮಿತಿ ಮೂಲಕ ಹೋರಾಟದ ಹಾದಿ ಹಿಡಿದ ಚಂದುರವರು ತಮ್ಮ ಜೀವಿತದುದ್ದಕ್ಕೂ ಹೋರಾಟದ ಬದುಕನ್ನೇ ರೂಪಿಸಿಕೊಂಡಿದ್ದರು. ತುಳುನಾಡಿನ ಎಲ್ಲೇ ಆದರೂ ದಲಿತರ ಮೇಲೆ ದೌರ್ಜನ್ಯಗಳಾದಾಗ ಹೋರಾಟದ ಮುಂಚೂಣಿಯಲ್ಲಿ ನಿಲ್ಲುತ್ತಿದ್ದ ಅವರು ದೌರ್ಜನ್ಯಕೋರರ ವಿರುದ್ಧ ಗುಡುಗಿನಂತೆ ಧ್ವನಿ ಎತ್ತುತ್ತಿದ್ದರು.
ನಂತರದ ದಿನಗಳಲ್ಲಿ ಬಹುಜನ ಸಮಾಜ ಪಾರ್ಟಿ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದ ಚಂದುರವರು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ 5,000ಕ್ಕೂ ಹೆಚ್ಚು ಮತಗಳನ್ನು ಪಡೆದು ರಾಜ್ಯದ ಗಮನ ಸೆಳೆದರು. ಅಲ್ಲದೆ ಜಿಲ್ಲೆಯಲ್ಲಿ ಬಿಎಸ್ಪಿಗೆ ಒಂದು ನೆಲೆಯನ್ನು ತೋರಿಸಿಕೊಟ್ಟಿದ್ದರು. ನಂತರದ ಬೆಳವಣಿಗೆಯಲ್ಲಿ ಮಾಜಿ ಶಾಸಕ ದಿ. ವಸಂತ ಬಂಗೇರರವರ ಜೊತೆ ರಾಜಕೀಯ ಹೆಜ್ಜೆ ಹಾಕಿದ ಚಂದುರವರು ಬೆಳ್ತಂಗಡಿ ತಾಲೂಕು ಪಂಚಾಯತ್ ಸದಸ್ಯರಾಗಿ, ಬಳಿಕ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಆ ನಂತರ ವಸಂತ ಬಂಗೇರರ ಕಟ್ಟಾ ಬೆಂಬಲಿಗರಾಗಿ ತಾಲೂಕಿನ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದರು.
ಚಂದುರವರು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದದ ರಾಜ್ಯ ಪ್ರಧಾನ ಸಂಚಾಲಕರು ಮಾವಳ್ಳಿ ಶಂಕರ್ ಸಹಿತ ಪ್ರಮುಖ ರಾಜ್ಯ ದಲಿತ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಅವರ ಲಾಯಿಲದ ನಿವಾಸಕ್ಕೂ ಭೇಟಿ ನೀಡಿ ಧೈರ್ಯ ತುಂಬಿದ್ದರು. ಮಾವಳ್ಳಿ ಶಂಕರ್ ಅವರೊಂದಿಗೆ ರಾಜ್ಯ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲೇಶ್ ಅಂಬುಗ, ಮೈಸೂರು ವಿಭಾಗೀಯ ಮುಖಂಡ ಸಿದ್ಧರಾಜು ದೊಂಡಿಂದವಾಡಿ, ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶಿವು ಗೊಬ್ಬರ್ಗಾಲ್, ಉಡುಪಿ ಜಿಲ್ಲಾ ಸಂಚಾಲಕ ಸುಂದರ ಮಾಸ್ತರ್, ವಿದ್ಯಾರ್ಥಿ ಸಂಚಾಲಕ ಎಸ್.ಎಸ್. ಪ್ರಸಾದ್ ಸಹಿತ ಹಲವು ಪ್ರಮುಖರು ಆಸ್ಪತ್ರೆ ಹಾಗೂ ನಿವಾಸಕ್ಕೆ ಭೇಟಿ ನೀಡಿ ಧೈರ್ಯ ತುಂಬಿದ್ದರು. ಆದರೆ ಬುಧವಾರ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.