ಚಿಕ್ಕಮಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆ ಕುಸಿತ, ರಸ್ತೆ ಹಾನಿಯ ಸುದ್ದಿ ಕೇಳುತ್ತಲೇ ಇದ್ದೇವೆ. ಈ ನಡುವೆ ತುಳುನಾಡು ಹಾಗೂ ಮಲೆನಾಡನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲಿನ ಹೆದ್ದಾರಿ ಹಾಗೂ ತಡೆಗೋಡೆಗಳಲ್ಲಿ ಬಿರುಕು ಕಂಡುಬಂದಿದ್ದು, ಕುಸಿಯುವ ಭೀತಿ ತಲೆದೋರಿದೆ.
ಈ ಹಿಂದೆ ಕುಸಿದಿದ್ದ ಜಾಗಗಳಲ್ಲಿ ಕಾಮಗಾಡಿ ನಡೆದಿದೆ. ಆದರೆ ಅದೇ ಜಾಗ ಮತ್ತು ಇತರ ಮೂರು ನಾಲ್ಕು ಕಡೆ ಬಿರುಕು ಕಂಡುಬಂದಿದೆ. 100-200 ಅಡಿ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಿದ ಜಾಗಗಳಲ್ಲೇ ರಸ್ತೆ ಬಿರುಕು ಕಂಡಿದೆ. ಇದು ಹೆದ್ದಾರಿ ಕುಸಿತದ ಭೀತಿಯನ್ನುಂಟು ಮಾಡಿದೆ. ಹೀಗಾಗಿ ಪ್ರಯಾಣಿಕರು ಜಾಗರೂಕರಾಗಿ ಪ್ರಯಾಣಿಸುವ ಅವಶ್ಯಕತೆಯಿದೆ. ಮಳೆ ಹಾಗೂ ಮಂಜಿನ ಕಾರಣ ಬಿರುಕುಗಳು ಕಾಣದೆ ಇರುವುದರಿಂದ ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಅನಿವಾರ್ಯವಾಗಿದೆ.
ಕೋಟ್ಯಂತರ ರೂ. ವ್ಯಯಿಸಿ ಕಾಮಗಾರಿ ನಡೆದಿದ್ದರೂ, ಕಳಪೆ ಕಾಮಗಾರಿ ನಡೆದಿದೆ ಎಂದು ವಾಹನ ಸವಾರರು ಆರೋಪಿಸುತ್ತಿದ್ದಾರೆ.