ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅಭಿನಯದ ʻಕರಿಯʼ ಸಿನಿಮಾ ಇಂದು ರಾಜ್ಯಾದ್ಯಂತ ರೀ ರಿಲೀಸ್ ಆಗಿದೆ. 20 ವರ್ಷಗಳ ಬಳಿಕ ಥಿಯೇಟರ್‌ಗಳಲ್ಲಿ ಮರು ಬಿಡುಗಡೆಯಾದ ಕರಿಯ ಚಿತ್ರವನ್ನು ದರ್ಶನ್ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ. ಆದರೆ, ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್‌ಗಳನ್ನು ಲಾಠಿ ಬೀಸಿ ಓಡಿಸಿದ ಘಟನೆ ನಡೆದಿದೆ.
ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್, ಕರಿಯ ಸಿನಿಮಾ ಪೋಸ್ಟರ್ ಜೊತೆಗೆ ವೈರಲ್ ಆದ ಜೈಲಿನ ಫೋಟೋಗೆ ಹಾಲಿನ ಅಭಿಷೇಕ ಮಾಡಿದರು. ಈ ವೇಳೆ ಗಲಾಟೆ ಮಾಡದಂತೆ ದರ್ಶನ್ ಅಭಿಮಾನಿಗಳಿಗೆ ಪೊಲೀಸರು ವಾರ್ನಿಂಗ್ ಕೊಟ್ಟರು. ಆದರೂ ದರ್ಶನ್ ಅಭಿಮಾನಿಯೊಬ್ಬ ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ದರ್ಶನ್ ಅಭಿಮಾನಿಯ ಗಲಾಟೆಗೆ ರೋಸಿ ಹೋದ ಪೊಲೀಸರು ಆತನನ್ನು ವಶಕ್ಕೆ ಪಡೆದರು. ಥಿಯೇಟರ್‌ನಿಂದ ಹೊರಗೆ ಎಳೆದುಕೊಂಡು ಹೋಗುವಾಗ ನನ್ನ ಬಿಟ್ಟು ಬಿಡಿ ಅಂತ ಪೊಲೀಸರ ಮುಂದೆ ಗೋಳಾಡಿದ. ಆದರೂ ಆಟೋದಲ್ಲಿ ಆತನನ್ನು ಕರೆದುಕೊಂಡು ಹೋದ ಪೊಲೀಸರು ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.
ರೀ ರಿಲೀಸ್ ಆದ ಕರಿಯ ಸಿನಿಮಾ ನೋಡಲು ಬಂದ ಫ್ಯಾನ್ಸ್ ಗಲಾಟೆಯಿಂದ ಬೇಸತ್ತ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ಕೂಡ ನಡೆದಿದೆ. ಪ್ರಸನ್ನ ಥಿಯೇಟರ್ ಮುಂದೆ ಜಮಾಯಿಸಿದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪೊಲೀಸರ ಏಟಿಗೆ ಚೆಲ್ಲಾಪಿಲ್ಲಿಯಾದ ದರ್ಶನ್ ಅಭಿಮಾನಿಗಳು ಥಿಯೇಟರ್ ಆವರಣದಿಂದ ಹೊರಗೆ ಓಡಿ ಹೋಗಿದ್ದಾರೆ.
![](https://tulunaduvarthe.com/wp-content/uploads/2024/08/ಕರಿಯ.jpg)