ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 17 ಮಂದಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. 3991 ಪುಟಗಳ ದೋಷಾರೋಪ ಪಟ್ಟಿಯ ಮುದ್ರಿತ ಪ್ರತಿಗಳನ್ನು ರಟ್ಟಿನ ಬಾಕ್ಸ್‌ನಲ್ಲಿ ತರಲಾಗಿತ್ತು. ಒಟ್ಟು 20 ಪ್ರತಿಗಳನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮೂವರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ, ಎಂಟು ವರದಿಗಳು, 231ಕ್ಕೂ ಹೆಚ್ಚು ಸಾಕ್ಷ್ಯಾಧಾರಗಳ ಹೇಳಿಕೆ ಸಹಿತ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ವಿಜಯನಗರದ ಎಸಿಪಿ ಚಂದನ್ ನೇತೃತ್ವದಲ್ಲಿ ತನಿಖೆ ನಡೆದಿತ್ತು.
ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದು, ಪವಿತ್ರಾ ಗೌಡ ಮೊದಲ ಆರೋಪಿಯಾಗಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಕೆ ವೇಳೆ ದರ್ಶನ್ ಮೊದಲ ಆರೋಪಿಯಾಗುವ ಸಾಧ್ಯತೆಗಳ ಬಗ್ಗೆ ಶಂಕಿಸಲಾಗಿತ್ತು. ಆದರೆ, ಆರೋಪಿಗಳ ಸ್ಥಾನ ಬದಲಾಗಿಲ್ಲ.
ತನಿಖೆ ಇನ್ನೂ ಬಾಕಿಯಿದ್ದು, ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆ ಪೂರ್ಣವಾದ ಬಳಿಕ ಮತ್ತೊಂದು ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಏಳು ಸಂಪುಟಗಳಲ್ಲಿ 10 ಕಡತಗಳನ್ನು ಈ ದೋಷಾರೋಪ ಪಟ್ಟಿ ಹೊಂದಿದೆ. 17 ಆರೋಪಿಗಳ ಬಂಧನವಾಗಿದೆ.