ದೇವನಳ್ಳಿ : ಕಾಮುಕರಿಂದ, ದುಷ್ಟರಿಂದ ರಕ್ಷಣೆ ಕೊಡಬೇಕಾದ ತಂದೆಯೇ ಮಗಳ ಮೇಲೆ ಕಾಮುಕನಂತೆ ಅತ್ಯಾಚಾರ ಎಸಗಿದ ನೀಚ ಕೃತ್ಯ ಹೊಸಕೋಟೆ ನಗರದಲ್ಲಿ ವರದಿಯಾಗಿದೆ. ತಂದೆಯಿಂದ ಅತ್ಯಾಚಾರಕ್ಕೊಳಗಾಗಿ ಮತ್ತು ಬೆದರಿಕೆ ಹಾಕಲ್ಪಟ್ಟ ಮಗಳು ಮನೆ ಬಿಟ್ಟು ಪಿಜಿಯಲ್ಲಿ ಆಶ್ರಯ ಪಡೆದ ಪ್ರಕರಣ ಇದೀಗ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಂದೆಯೇ ಮಗಳ ಮೇಲೆ ಅತ್ಯಾಚಾರ ಎಸಗಿ, ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯ ಎಸಗಿದ್ದಾನೆ. 19 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಮಾಡಿದ್ದರ ಜತೆಗೆ ಆಕೆಗೆ ಬೆದರಿಕೆಯನ್ನೂ ಹಾಕಿದ್ದಾನೆ. ಸದ್ಯ ಹೊಸಕೋಟೆ ಮಹಿಳಾ ಠಾಣೆ ಪೊಲೀಸರು ಆರೋಪಿ ಮಂಜುನಾಥ್ನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದಾರೆ.
ಕಾರು ಚಾಲಕನಾಗಿರುವ ಮಂಜುನಾಥ್ಗೆ ಮೂರು ಜನ ಮಕ್ಕಳು. ಇಬ್ಬರು ಹೆಣ್ಣು, ಒಂದು ಗಂಡು ಮಗು. ಹಿರಿಯ ಮಗಳ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಹಾಗೂ ದೂರು ದಾಖಲಾಗಿದೆ. ತಂದೆಯ ಕಾಟ ತಾಳಲಾರದೆ ಮಗಳು ಪಿಜಿಯಲ್ಲಿ ವಾಸ ಮಾಡುತ್ತಿದ್ದಳು ಎನ್ನಲಾಗಿದೆ. ವಿಷಯ ತಿಳಿಸಿದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಲಾಗಿತ್ತು.
ಹೀಗಾಗಿ ಜೀವ ಭಯದಿಂದ ಮಗಳು ಮನೆಯಿಂದ ದೂರ ಉಳಿದಿದ್ದಳು. ತಂದೆಯಿಂದಾದ ಅನಾಚರಕ್ಕೆ ನ್ಯಾಯ ಒದಗಿಸುವಂತೆ ಮಗಳು ಆಗ್ರಹಿಸಿದ್ದು, ಸದ್ಯ ಪೊಲೀಸರಿಂದ ತನಿಖೆ ನಡೆಯುತ್ತಿದೆ.