ದಾವಣಗೆರೆ: ಬೇತೂರು ರಸ್ತೆಯ ವೆಂಕಾಬೋವಿ ಕಾಲೊನಿಯಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿ 30ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದ್ದು, 14ಕ್ಕೂ ಹೆಚ್ಚು ಜನರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಕಳೆದ ರಾತ್ರಿ ಕಲ್ಲು ತೂರಾಟ ನಡೆದಿತ್ತು. ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಪರಿಸ್ಥಿತಿ ನಿಯಂತ್ರಣಗೊಂಡಿತ್ತು. ಘಟನೆಯ ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಮೂವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದರು. 14ಕ್ಕೂ ಹೆಚ್ಚು ಜನರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವರಿಗೆಲ್ಲಾ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆರ್. ಹಿತೇಂದ್ರ ಇಂದು ಬೆಳಗ್ಗೆ ದಾವಣಗೆರೆಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ, ಜನಜೀವನ ಎಂದಿನಂತೆ ಸಹಜವಾಗಿದೆ. ವ್ಯಾಪಾರ ವಹಿವಾಟು, ಶಾಲಾ ಕಾಲೇಜುಗಳು ನಡೆದಿವೆ.