Wednesday, July 24, 2024
Homeರಾಷ್ಟ್ರೀಯ9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು 9 ದಿನದಲ್ಲಿ ಹುಡುಕಿಸಿಕೊಟ್ಟ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್!‌

9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿಯನ್ನು 9 ದಿನದಲ್ಲಿ ಹುಡುಕಿಸಿಕೊಟ್ಟ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್!‌

ಪ್ರೀತಿಯ ನಾಟಕವಾಡಿ ಜಮ್ಮುವಿನಲ್ಲಿರಿಸಿದ್ದ ಬಾಲಕಿಯನ್ನು ವಿಜಯವಾಡಕ್ಕೆ ಕರೆ ತಂದ ರೋಚಕ ಕತೆ!
ಅಮರಾವತಿ: ಕಾಲೇಜಿಗೆ ಹೋಗಿದ್ದ ಮಗಳು ಮನೆಗೆ ಬಾರದೆ ಒಂಬತ್ತು ತಿಂಗಳಾಗಿತ್ತು. ಪೊಲೀಸ್‌ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ನಿರ್ಲಕ್ಷ ವಹಿಸಿದ್ದರು. ಆದರೆ ಆಂಧ್ರ ಪ್ರದೇಶದ ನೂತನ ಡಿಸಿಎಂ ಪವನ್‌ ಕಲ್ಯಾಣ್‌ ಬಳಿ ಬಾಲಕಿಯ ತಾಯಿ ತನ್ನ ದುಃಖವನ್ನು ಹೇಳಿಕೊಂಡ ಒಂಬತ್ತು ದಿನದೊಳಗೆ ಬಾಲಕಿಯನ್ನು ಪತ್ತೆ ಹಚ್ಚಿ ಕರೆ ತರಲಾಗಿದೆ.
ಆಂಧ್ರ ಪ್ರದೇಶದಲ್ಲಿ ಮಹಿಳೆಯರು, ಬಾಲಕಿಯರು ನಾಪತ್ತೆಯಾಗುತ್ತಿರುವ ಬಗ್ಗೆ ಪವನ್‌ ಕಲ್ಯಾಣ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಈ ನಡುವೆ ಗೋದಾವರಿ ಜಿಲ್ಲೆಯ ಭೀಮಾವರಂಗೆ ಆಗಮಿಸಿದ್ದ ಪವನ್‌ ಕಲ್ಯಾಣ್‌ ಬಳಿ ಆಗಮಿಸಿದ ಮಹಿಳೆಯೊಬ್ಬರು ತಮ್ಮ ಮಗಳು ನಾಪತ್ತೆಯಾಗಿ ಒಂಬತ್ತು ತಿಂಗಳಾಗಿವೆ, ಹುಡುಕಿಸಿ ಕೊಡಿ ಎಂದು ವಿನಂತಿಸಿದ್ದಾರೆ. ಅದರಂತೆ ಪವನ್‌ ಕಲ್ಯಾಣ್‌ ಸಂಬಂಧಪಟ್ಟ ಅಧಿಕಾರಿಗಳ ಬಳಿ ಮಾತನಾಡಿ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸುವಂತೆ ತಾಕೀತು ಮಾಡಿದ್ದಾರೆ.
ಉಪ ಮುಖ್ಯಮಂತ್ರಿಯವರಿಂದ ನಿರ್ದೇಶಿತರಾದ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದಾಗ ಬಾಲಕಿಯು ವಿಜಯವಾಡದ ರಾಮವರಪ್ಪಾಡು ಮೂಲದ ಯುವಕನೊಂದಿಗೆ ಜಮ್ಮುವಿನಲ್ಲಿರುವುದು ಪತ್ತೆಯಾಗಿದೆ. ಕೂಡಲೇ ಅಲ್ಲಿಗೆ ತೆರಳಿದ ತಂಡ ಇಬ್ಬರನ್ನೂ ವಶಕ್ಕೆ ಪಡೆದು ವಿಜಯವಾಡಕ್ಕೆ ಕರೆ ತಂದಿದ್ದಾರೆ.
ಯುವಕ ತನ್ನನ್ನು ಪ್ರೀತಿಸುವ ನಾಟಕವಾಡಿ ಬಲವಂತವಾಗಿ ಹೈದರಾಬಾದ್‌ಗೆ ಕರೆದೊಯ್ದಿದ್ದ. ಅಲ್ಲಿ ಕೆಲವು ದಿನಗಳ ಬಳಿಕ ಪೊಲೀಸರು ತಮ್ಮನ್ನು ಹುಡುಕಬಹುದೆಂದು ಜಮ್ಮುವಿಗೆ ಕರೆದೊಯ್ಯಲು ನಿರ್ಧರಿಸಿದ್ದ. ಆದರೆ ಕೈಯಲ್ಲಿ ಹಣವಿಲ್ಲದಿದ್ದ ಕಾರಣ ತನ್ನ ಬಳಿಯಿದ್ದ ಮೊಬೈಲ್‌ ಹಾಗೂ ಯುವತಿಯ ಬಳಿಯಿದ್ದ ಚಿನ್ನಾಭರಣ ಮಾರಾಟ ಮಾಡಿ ಜಮ್ಮುವಿಗೆ ಕರೆದೊಯ್ದಿದ್ದ. ಅಲ್ಲಿ ಒಂದು ಹೊಟೇಲ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ತನಗೆ ಮೊಬೈಲ್‌ ಬಳಸಲು ಮಾತ್ರ ಅವಕಾಶ ನೀಡಿಲ್ಲ ಎಂದು ಬಾಲಕಿ ವಿಚಾರಣೆಯ ವೇಳೆ ಹೇಳಿದ್ದಾಳೆ. ಒಮ್ಮೆ ಆತ ಕೆಲಸಕ್ಕೆ ಹೋಗಿದ್ದಾಗ ಹೇಗೋ ತನ್ನ ಸಹೋದರಿಗೆ ಇನ್ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸಿದ್ದನ್ನು ಆಧರಿಸಿ ಪೊಲೀಸರು ಇಬ್ಬರನ್ನೂ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.


ಯುವಕ ಈಗ ಬಂಧಿತನಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್‌ 366 (ಅಪಹರಣ). 344ರಡಿ ಪ್ರಕರಣ ದಾಖಲಿಸಲಾಗಿದೆ.


ಒಂಬತ್ತು ತಿಂಗಳಿನಿಂದ ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸರನ್ನು ಡಿಸಿಎಂ ಪವನ್‌ ಕಲ್ಯಾಣ್‌ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ವಲಯದಲ್ಲಿ ಡಿಸಿಎಂ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

RELATED ARTICLES
- Advertisment -
Google search engine

Most Popular