ಇಲ್ಲಿನ ‘ರೈ ಎಸ್ಟೇಟ್ ಎಜ್ಯುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್’ ಜನಸೇವಾ ಕೇಂದ್ರದ ವತಿಯಿಂದ ದೀಪಾವಳಿ ಪ್ರಯುಕ್ತ ಟ್ರಸ್ಟ್ ಫಲಾನುಭವಿಗಳ ಸಮಾವೇಶ- ದಶಸಂಭ್ರಮ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮ ಅ.26ರಂದು ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದ್ದು, ಸಿದ್ಧತೆ ಭರದಿಂದ ಸಾಗಿದೆ ಎಂದು ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಕೆ.ಎಸ್ ಕೋಡಿಂಬಾಡಿ ತಿಳಿಸಿದರು.
ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ರೈ ಎಸ್ಟೇಟ್ ಕೋಡಿಂಬಾಡಿಯ ಗಿರಿಜಾ ಎಸ್.ರೈ ದೀಪ ಪ್ರಜ್ವಲನೆ ಮಾಡುವರು. ಬೆಳಿಗ್ಗೆ 10ಕ್ಕೆ ವಿಠಲ ನಾಯಕ್ ಕಲ್ಲಡ್ಕ ಅವರಿಂದ ‘ಗೀತಾ ಸಾಹಿತ್ಯ ಸಂಭ್ರಮ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು. ಬೆಳಿಗ್ಗೆ 11ರಿಂದ ಸರ್ವ ಧರ್ಮ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಒಡಿಯೂರು ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಅಶೋಕ್ ಕುಮಾರ್ ರೈ ಅಧ್ಯಕ್ಷತೆ ವಹಿಸುವರು. ಸಂಸದ ಡಿ.ವಿ.ಸದಾನಂದ ಗೌಡ ಬಡ ಸ್ವಾವಲಂಬಿ ಸಾಧಕರನ್ನು ಸನ್ಮಾನಿಸುವರು. ಮಾಜಿ ಸಚಿವ ಬಿ.ರಮಾನಾಥ ರೈ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಪುತ್ತೂರು ಮಾಯಿದೆ ದೇವುಸ್ ಚರ್ಚ್ನ ಧರ್ಮಗುರು ಲಾರೆನ್ಸ್ ಮಸ್ಕರೇನ್ಹಸ್, ಮುಸ್ಲಿಂ ಧಾರ್ಮಿಕ ಮುಖಂಡ ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ ಭಾಗವಹಿಸುವರು. ಸಭಾ ಕಾರ್ಯಕ್ರಮದ ಬಳಿಕ ಶೃಂಗೇರಿಯ ಶಾರದಾ ಅಂಧರ ಗೀತಗಾಯನ ಕಲಾ ಸಂಘದಿಂದ ಗೀತಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ 30ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, 26 ಸಾವಿರ ಮಂದಿಗೆ ವಿತರಿಸಲು ವಸ್ತ್ರಗಳು ಸಿದ್ಧವಾಗಿದೆ. ಹೆಚ್ಚುವರಿಯಾಗಿ 6 ಸಾವಿರದಷ್ಟು ಮಂದಿಗೆ ವಸ್ತ್ರ ವಿತರಣೆ ಮಾಡುವಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿವಿಧ ಕ್ಷೇತ್ರದಲ್ಲಿನ 30 ಮಂದಿ ಬಡ ಸ್ವಾವಲಂಬಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾವುದು. 20 ಕೌಂಟರ್ಗಳ ಮೂಲಕ ವಸ್ತ್ರವಿತರಣೆ ಮಾಡಲಾಗುವುದು. 15 ಕೌಂಟರಗಳ ಮೂಲಕ ಊಟದ ವ್ಯವಸ್ಥೆ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮ ಸಮಿತಿ ಸಂಚಾಲಕ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಶಶಿಕುಮಾರ್ ರೈ ಬಾಲ್ಯೊಟ್ಟು, ಕೇಶವ ಭಂಡಾರಿ ಕೈಪ, ಜಯಪ್ರಕಾಶ್ ಬದಿನಾರು ಇದ್ದರು.
ಗೂಡುದೀಪ ಸ್ಪರ್ಧೆ: ದೀಪಾವಳಿ ಪ್ರಯುಕ್ತ ಬೆಳಿಗ್ಗೆ 9ಕ್ಕೆ ಸ್ಥಳದಲ್ಲಿ ಗೂಡುದೀಪ ಸ್ಪರ್ಧೆ ಏರ್ಪಡಿಸಲಾಗಿದೆ. ಗೂಡುದೀಪವನ್ನು ಮನೆಯಲ್ಲಿ ತಯಾರಿಸಿ ತಂದು ಸಭಾಂಗಣದಲ್ಲಿ ಜೋಡಿಸಬೇಕು. ಪ್ರಥಮ ಬಹುಮಾನ ₹ 7500, ದ್ವಿತೀಯ ಬಹುಮಾನ ₹ 5ಸಾವಿರ ಮತ್ತು ತೃತೀಯ ಬಹುಮಾನ ₹ 2500 ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ತಿಳಿಸಿದರು.