ವೇಣೂರು ಸಮೀಪದ ಪೆರಿಂಜೆ ಪಡ್ಯಾರಬೆಟ್ಟು ಮೂಲ ಕೊಡಮಣಿತ್ತಾಯ ದೈವಸ್ಥಾನಕ್ಕೆ , ದೈವಗಳಿಗೆ ಹಾಕಿದ ಹೂವಿನ ಹಾರವನ್ನು ಸಂಗ್ರಹಿಸಿ ಇಡಲು , ಅಪೂರ್ವ ಕೆತ್ತನೆಯ " ಪುಷ್ಪ ದಂಡಿಗೆ " ಯನ್ನು ಪಡ್ಯಾರಬೆಟ್ಟು ದೈವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಇಂದು , ಪಡ್ಯಾರಬೆಟ್ಟು ದೈವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ಮಾರೂರು ಖಂಡಿಗ ಶ್ರೀ ರಾಮದಾಸ ಅಸ್ರಣ್ಣರು ದೈವಸ್ಥಾನಕ್ಕೆ ಸೇವಾರೂಪವಾಗಿ ಸಮರ್ಪಿಸಿದರು . ಮೂಡುಬಿದಿರೆ ದೇವಕೀ ಲಕ್ಷ್ಮಿ ಸಾ ಮಿಲ್ ನ ಮಾಲಕರಾದ ಪ್ರೇಮನಾಥ ಮಾರ್ಲರು , ತಮ್ಮದೇ ಮಿಲ್ ನಲ್ಲಿ ನಿರ್ಮಿಸಿದ ಈ ಪುಷ್ಪ ದಂಡಿಗೆಯು ಸುಂದರವಾದ ಹಾಗೂ ಅಪೂರ್ವವಾದ ಕೆತ್ತನೆಯಿಂದ ಕೂಡಿದೆ . ಉತ್ತಮ ಗುಣಮಟ್ಟದ ಮರದಿಂದ ನಿರ್ಮಿಸಿದ ಈ ಪುಷ್ಪದಂಡಿಗೆಯು ಆನೆಯ ಕಾಲನ್ನು ಹೋಲುವ ನಾಲ್ಕು ಕಾಲುಗಳನ್ನು , ಮೇಲ್ಭಾಗದಲ್ಲಿ ನಾಲ್ಕು ಆನೆಗಳ ಸೊಂಡಿಲುಗಳನ್ನು ಹೊಂದಿದ್ದು , ಈ ಸೊಂಡಿಲಿನಲ್ಲೇ ಹೂವಿನ ಹಾರಗಳನ್ನು ಸಂಗ್ರಹಿಸಿ ಇಡುವ ರೀತಿಯಲ್ಲಿ ನಿರ್ಮಿಸಲಾಗಿದೆ .ಪುಷ್ಪಗಳ ಹಾರಗಳನ್ನು ಸಂಗ್ರಹಿಸಿ ಇಡುವ ಈ ಪುಷ್ಪ ದಂಡಿಗೆಯ ಕಲ್ಪನೆ ಪ್ರೇಮನಾಥ ಮಾರ್ಲರದ್ದೇ ಆಗಿದೆ. ನಾಲ್ಕೂ ಆನೆಗಳು ತನ್ನ ಸೊಂಡಿಲಿನಲ್ಲಿ ಬ್ರಹ್ಮಕಮಲವನ್ನು ತೂಗುವ ಕಲ್ಪನೆಯ ಕೆತ್ತನೆಯೂ ಈ ದಂಡಿಗೆಯಲ್ಲಿ ಪ್ರೇಮನಾಥರ ವಿಶೇಷ ಕಲ್ಪನೆಯಲ್ಲಿ ಮೂಡಿ ಬಂದಿದೆ . ಪ್ರೇಮನಾಥ ಮಾರ್ಲರು ಮೂರು ತಿಂಗಳ ಹಿಂದೆ , ತಮ್ಮದೇ ಮಿಲ್ ನಲ್ಲಿ ನಿರ್ಮಿಸಿದ ಇದೇ ರೀತಿಯ ಪುಷ್ಪದಂಡಿಗೆಯನ್ನು ತೋಡಾರಿನ ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಮರ್ಪಿಸಿದ್ದುದು ದಕ್ಷಿಣ ಕನ್ನಡ ಜಿಲ್ಲೆಯ ದೈವಸ್ಥಾನಗಳಲ್ಲಿ ಪ್ರಥಮವಾಗಿತ್ತು . ಇದೀಗ ತಮ್ಮದೇ ಮಿಲ್ ನಲ್ಲಿ ನಿರ್ಮಿಸಿದ ಎರಡನೇ ಪುಷ್ಪದಂಡಿಗೆಯು ಪಡ್ಯಾರಬೆಟ್ಟು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸಮರ್ಪಿತವಾಗಿದೆ .
ಈ ಪುಷ್ಪ ದಂಡಿಗೆಯನ್ನು ಸಮರ್ಪಿಸುವ ಸಂದರ್ಭದಲ್ಲಿ ಸೇವಾಕರ್ತರಾದ ಮಾರೂರು ಖಂಡಿಗ ಶ್ರೀ ರಾಮದಾಸ ಅಸ್ರಣ್ಣ , ಪ್ರಸನ್ನ ಅಸ್ರಣ್ಣ , ಶ್ರೀಶ ಅಸ್ರಣ್ಣ , ಪಡ್ಯಾರಬೆಟ್ಟು ದೈವಸ್ಥಾನದ ಅನುವಂಶೀಯ ಆಡಳಿತದಾರ ಶ್ರೀ ಜೀವಂಧರ ಬಲ್ಲಾಳ್ ಯಾನೆ ಕಂಚಿಪೂವಣಿ , ಉದ್ಯಮಿ ಕಾರಮೊಗರಗುತ್ತು ಪ್ರೇಮನಾಥ ಮಾರ್ಲ , ವಿಕಾಸ್ ಜೈನ್ , ವಿಶ್ವಾಸ್ ಜೈನ್ , ಯಕ್ಷಗಾನ ವಿಮರ್ಶಕ ಎಂ.ಶಾಂತರಾಮ ಕುಡ್ವ , ಪುನೀತ್ ಕುಮಾರ್ ಕಂಬಳಿ ಕಟ್ಟೆಮಾರ್, ಶ್ರೀ ಹಾನ್ಯಗುತ್ತು ಮನೋಜ್ ಶೆಟ್ಟಿ , ಹಾನ್ಯಗುತ್ತು ರಿತೇಶ್ ಶೆಟ್ಟಿ , ಕಾರಮೊಗರಗುತ್ತು ಕಿರಣ್ ಕುಮಾರ್ ಮಾರ್ಲ , ಹಾನ್ಯಗುತ್ತು ಶ್ರೀ ಭುವನ್ ವೈಷ್ಣವ ಮಾರ್ಲ , ಕ್ಷೇತ್ರದ ಮುಕ್ಕಾಲ್ದಿ ಮಂಜದಡೆಗುತ್ತು ಸುನೀಲ್ ಶೆಟ್ಟಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು .