ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಈ ನಡುವೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಮೇಲ್ಛಾವಣಿ ಕುಸಿದು ಬಿದ್ದು, ಹಲವು ವಾಹನಗಳು ಜಖಂಗೊಂಡಿವೆ. ಅಲ್ಲದೆ ಒಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡ ಆರು ಮಂದಿಯನ್ನು ವಿಮಾನ ನಿಲ್ದಾಣದ ಬಳಿಯ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಒಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಜಖಂಗೊಂಡಿರುವ ವಾಹನಗಳಲ್ಲಿ ಜನ ಸಿಲುಕಿಕೊಂಡಿರುವ ಶಂಕೆಯಲ್ಲಿ ಶೋಧ ಕಾರ್ಯ ನಡೆದಿದೆ.
ಘಟನೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆವರೆಗೆ ವಿಮಾನ ಕಾರ್ಯಾಚರಣೆ ಸ್ಥಗಿತಗೊಂಡಿದೆ. ವಿಮಾನಗಳ ಆಗಮನಕ್ಕೆ ಯಾವುದೇ ಅಡಚಣೆಯಿಲ್ಲ. ಟರ್ಮಿನಲ್ 1ರಿಂದ ಎಲ್ಲಾ ನಿರ್ಗಮನಗಳನ್ನು ಸ್ಥಗಿತಗೊಳಿಸಲಾಗಿದೆ.