ಮಸ್ಕಿ: ಆಟೋದಲ್ಲಿ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಗರದಲ್ಲಿ ಶುಕ್ರವಾರ ನಡೆದಿದೆ. ಹೆರಿಗೆಗಾಗಿ ಆಸ್ಪತ್ರೆಗೆ ತೆರಳುವ ವೇಳೆ ನೋವು ಹೆಚ್ಚಾದ ಕಾರಣ ಆಟೊದಲ್ಲೇ ಹೆರಿಗೆ ಮಾಡಿಸಲಾದ ಘಟನೆ ನಡೆದಿದೆ.
ನಗರದ 8ನೇ ಬಡಾವಣೆಯ ಶೇಷಮ್ಮ ಎಂಬ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೆರಿಗೆ ಮಾಡಿಸಲು ಆಟೊದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ರಸ್ತೆ ಮಧ್ಯೆ ನೋವು ಹೆಚ್ಚಾಗಿ ಕಾಣಿಸಿಕೊಂಡಿದೆ. ಇದನ್ನು ಅರಿತ ಚಾಲಕ ಆಟೊ ನಿಲ್ಲಿಸಿದ್ದಾನೆ. ತಕ್ಷಣವೇ ನೆರೆ ಹೊರೆ ಮಹಿಳೆಯರು ಆಟೊದ ಸುತ್ತ ಸೀರೆಯಿಂದ ಪರದೆ ಕಟ್ಟಿ ಹೆರಿಗೆ ಮಾಡಿಸಿದ್ದಾರೆ. ಆಟೊದಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ಮಾಡಿಸಿದ ಮಹಿಳೆಯರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಿಕ ಮಹಿಳೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಆರೋಗ್ಯವಾಗಿದ್ದಾರೆ.