ಮಂಗಳೂರು : ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳುವನ್ನು ರಾಜ್ಯದ 2ನೇ ಭಾಷೆಯನ್ನಾಗಿ ಘೋಷಿಸಬೇಕು ಮತ್ತು 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.
ತುಳುಭಾಷೆಗೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ವಿಧಾನ ಪರಿಷತ್ ಸಭೆಯಲ್ಲಿ ಸದಸ್ಯ ಬಿ.ಎಂ. ಫಾರೂಕ್ ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಹರೀಶ್ ಕುಮಾರ್, ತುಳು ಭಾಷೆ ಕೇವಲ ದಕ್ಷಿಣ ಕನ್ನಡಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ ಯಲ್ಲಿ ವ್ಯಾಪಿಸಿದೆ. ಇದು ಮಾತ್ರವಲ್ಲದೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ, ಹೊರರಾಜ್ಯದಲ್ಲೂ, ವಿದೇಶದಲ್ಲೂ ತುಳುವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಮೂಲದ ಪ್ರಕಾರ 30ಲಕ್ಷಕ್ಕೂ ಅಧಿಕ ತುಳುವರಿದ್ದು, ತುಳು ಭಾಷೆಗೆ ಲಿಪಿಯೂ ಇದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ನೇತೃತ್ವದಲ್ಲಿ ವಿಶ್ವ ತುಳು ಸಮ್ಮೇಳನ ನಡೆದಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿ ಮೂಡಿತ್ತು ಈ ಕಾರಣದಿಂದ ಆ ಭಾಷೆಗೆ ರಾಜ್ಯದ ಸ್ಥಾನಮಾನ ಹಾಗೂ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಗೊಳಿಸಬೇಕು ಎಂದು ಹೇಳಿದರು.