ಮಂಗಳೂರು: ದಂತ ವೈದ್ಯೆಯೊಬ್ಬರು ನಗರದ ಪಾಂಡೇಶ್ವರದ ಪಿಜಿಯೊಂದರಲ್ಲಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಳ್ಳಾಲ ತಾಲೂಕಿನ ನರಿಂಗಾನ ಗ್ರಾಮದ ಆಳ್ವರಬೆಟ್ಟು ನಿವಾಸಿ, ಹಿರಿಯ ಆರೆಸ್ಸೆಸ್ ಮುಖಂಡ, ಶಾಂತಿಪಳಿಕೆ ಶ್ರೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಾಮಣ್ಣ ಶೆಟ್ಟಿ ಹಾಗೂ ಜ್ಯೋತಿ ಶೆಟ್ಟಿ ದಂಪತಿಯ ಪುತ್ರಿ, 24ರ ಹರೆಯದ ಸ್ವಾತಿ ಶೆಟ್ಟಿ ಮೃತಪಟ್ಟವರು. ಬಿಡಿಎಸ್ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಮಂಗಳವಾರದಿಂದ ಕೆಲಸಕ್ಕೆ ಹಾಜರಾಗಬೇಕಾಗಿತ್ತು.
ಸೋಮವಾರ ತಾಯಿ ಜೊತೆಗೆ ಪಾಂಡೇಶ್ವರ ಕ್ಲಿನಿಕ್ ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಮಂಗಳವಾರದಿಂದ ಕೆಲಸಕ್ಕೆ ಸೇರುವ ಬಗ್ಗೆ ನಿರ್ಧರಿಸಿದ್ದರು. ಹೀಗಾಗಿ ಪಾಂಡೇಶ್ವರ ಪೊಲೀಸ್ ಠಾಣೆಯ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ಸೋಮವಾರ ರಾತ್ರಿ ತಾಯಿ ಜೊತೆಗೆ ಮಾತನಾಡಿ ವಿಪರೀತ ತಲೆನೋವು ಎಂಬುದಾಗಿ ಹೇಳಿದ್ದರು ಎಂದು ತಿಳಿದುಬಂದಿದೆ.
ತಲೆನೋವು ಎಂದಿದ್ದರಿಂದ ಜೊತೆಗಿದ್ದವರು ಅವರಿಗೆ ತೊಂದರೆ ಕೊಡುವುದು ಬೇಡ ಎಂದು ಎಚ್ಚರಿಸಿರಲಿಲ್ಲ. ಬೆಳಿಗ್ಗೆ ದೇಹ ತಣ್ಣಗಿದ್ದುದನ್ನು ಕಂಡು ಪಿಜಿ ಸೂಪರ್ ವೈಸರ್ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು.
ಅವಿವಾಹಿತರಾಗಿರುವ ಸ್ವಾತಿಗೆ ವರ್ಷಾಂತ್ಯದೊಳಗೆ ಮದುವೆ ಮಾಡಬೇಕು ಎಂದು ಪೋಷಕರು ಬಯಸಿದ್ದರು. ಅಪರೂಪಕ್ಕೊಮ್ಮೆ ತಲೆನೋವು ಬಿಟ್ರೆ ಬೇರೆ ಯಾವುದೇ ತೊಂದರೆ ಇರಲಿಲ್ಲ ಎನ್ನಲಾಗಿದೆ.