ತುಳು ನಾಟಕ ರಂಗ ಮತ್ತು ಚಿತ್ರರಂಗದ ಜನಪ್ರಿಯ ದಿಗ್ಗಜ ನಟ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎನ್ನಲಾದ ಘಟನೆಯಿಂದ ದೊಡ್ಡ ವಿವಾದವೊಂದು ಸೃಷ್ಟಿಯಾಗಿದೆ. ಈ ಬಗ್ಗೆ ಸುದ್ದಿವಾಹಿನಿಯೊಂದು ವರದಿ ಮಾಡಿದ್ದು, ವಿವಾದಕ್ಕೆ ತಿರುಗುತ್ತಿದ್ದಂತೆ ದೇವದಾಸ್ ಕಾಪಿಕಾಡ್ ಯೂಟರ್ನ್ ಹೊಡೆದಿದ್ದಾರೆ ಎನ್ನಲಾಗಿದೆ. ದೇವದಾಸ್ ಕಾಪಿಕಾಡ್ ಇತ್ತೀಚೆಗೆ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಸೌದಿ ಅರೇಬಿಯಾದಲ್ಲಿ ನಡೆಯಬೇಕಿದ್ದ ಇವರ ಕಾಮಿಡಿ ಶೋಗೆ ಬಹಿಷ್ಕಾರದ ಬೆದರಿಕೆ ಬಂದಿದೆ ಎನ್ನಲಾಗಿದೆ. ಹೀಗಾಗಿ ಅವರು ತಮ್ಮ ನಿಲುವಿನಿಂದ ಹಿಂದಕ್ಕೆ ಸರಿದಿದ್ದಾರೆ ಎಂದೂ ವರದಿ ತಿಳಿಸಿದೆ.
ತುಳು ಸಿನಿಮಾ ಹಾಗೂ ನಾಟಕ ರಂಗದಲ್ಲಿ ದೇವದಾಸ್ ಕಾಪಿಕಾಡ್ ದೊಡ್ಡ ಹೆಸರು ಮಾಡಿದ್ದಾರೆ. ಅವರು ಕಲಾವಿದನಾಗಿ, ನಿರ್ದೇಶಕನಾಗಿ ಜನಪ್ರಿಯರಾಗಿದ್ದಾರೆ. ಸೆ.4ರಂದು ಅವರು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಸಮ್ಮುಖದಲ್ಲಿ ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದರು. ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಅವರು ಆನ್‌ಲೈನ್ ಸದಸ್ಯತ್ವ ಪಡೆದಿದ್ದರು. ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದ ಬಗ್ಗೆ ಪಕ್ಷದ ಕಡೆಯಿಂದ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಲಾಗಿತ್ತು.
ಈ ಪೋಸ್ಟ್ ವೈರಲ್ ಆಗಿದ್ದು, ಇದು ದೇವದಾಸ್‌ಗೆ ಸಂಕಷ್ಟವನ್ನು ತಂದಿಟ್ಟಿದೆ. ಸೆ.13 ಮತ್ತು ಸೆ.14ರಂದು ಸೌದಿಯ ಜುಬೈಲ್‌ನ ಪುಲಿ ರೆಸ್ಟೋರೆಂಟ್‌ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಬಹಿಷ್ಕರಿಸಿ ಎಂಬ ಪೋಸ್ಟ್ ವೈರಲ್ ಆಗಿದೆ. ಈ ಬಹಿಷ್ಕಾರದ ಬೆದರಿಕೆ ಹಿನ್ನೆಲೆಯಲ್ಲಿ ಕಾಪಿಕಾಡ್ ಯೂಟರ್ನ್ ಹೊಡೆದಿದ್ದಾರೆ.
ನಾನು ಬಿಜೆಪಿ ಸದಸ್ಯತ್ವ ಪಡೆದಿಲ್ಲ ಎಂದು ಸಾಮಾಜಿಕ ತಾಣಗಳಲ್ಲಿ ಕಾಪಿಕಾಡ್ ಸ್ಪಷ್ಟನೆ ಆಡಿಯೋ ಹರಿಬಿಟ್ಟಿದ್ದಾರೆ. ʻʻಬಿಜೆಪಿ ನಾಯಕರ ಜೊತೆ ಕೇವಲ ಸೌಹಾರ್ದ ಭೇಟಿ ನಡೆದಿದೆ. ನಾನು ಯಾವುದೇ ಪಕ್ಷಕ್ಕೂ ಸೇರಿದವನಲ್ಲ. ಯಾವುದೇ ಪಕ್ಷಕ್ಕೆ ಸೇರ್ಪಡೆಯೂ ಆಗಿಲ್ಲ. ಎಲ್ಲಾ ಪಕ್ಷಗಳ ಮುಖಂಡರ ಜೊತೆ ನನಗೆ ಉತ್ತಮ ಸಂಬಂಧ ಇದೆʼʼ ಎಂದು ದೇವದಾಸ್ ಕಾಪಿಕಾಡ್ ಸ್ಪಷ್ಟನೆ ಕೊಟ್ಟಿದ್ದಾರೆ. ಸೌದಿ ಕಾರ್ಯಕ್ರಮದ ಬಹಿಷ್ಕಾರದ ಬೆದರಿಕೆಯ ಹಿನ್ನೆಲೆಯಲ್ಲಿ ದೇವದಾಸ್ ಕಾಪಿಕಾಡ್ ಯೂಟರ್ನ್ ಹೊಡೆದರಾ? ಎಂಬ ಪ್ರಶ್ನೆ ಎದ್ದಿದೆ.