Sunday, January 19, 2025
Homeಧರ್ಮಸ್ಥಳಧರ್ಮಸ್ಥಳ: ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಆರಾಮದಾಯಕ ಸರತಿಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ” ಉದ್ಘಾಟನೆ

ಧರ್ಮಸ್ಥಳ: ಭಕ್ತಾದಿಗಳಿಗೆ ದೇವರ ದರ್ಶನಕ್ಕಾಗಿ ಆರಾಮದಾಯಕ ಸರತಿಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ” ಉದ್ಘಾಟನೆ

ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ, ಸರ್ವಧರ್ಮ ಸಮನ್ವಯ ಕ್ಷೇತ್ರವೆಂದೇ ಚಿರಪರಿಚಿತವಾಗಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಾದಿಗಳಿಗೆ ದೇವರದರ್ಶನಕ್ಕಾಗಿ ಆರಾಮದಾಯಕ ಸರತಿಸಾಲಿನ ನೂತನ ಸಂಕೀರ್ಣ “ಶ್ರೀ ಸಾನ್ನಿಧ್ಯ” ನಿರ್ಮಾಣಗೊಂಡಿದ್ದು ಇಂದು ಮಂಗಳವಾರ ಅಪರಾಹ್ನ ಎರಡು ಗಂಟೆಗೆ ಮಾನ್ಯ ಜಗದೀಪ್ ಧನ್‌ಕರ್ ಉದ್ಘಾಟಿಸುವರು.
ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು. ಡಾ. ಸುದೇಶ್ ಧನ್‌ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮಾನ್ಯ ದಿನೇಶ್ ಗುಂಡೂರಾವ್, ಹೇಮಾವತಿ ವೀ. ಹೆಗ್ಗಡೆ, ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಶಾಸನ ಹರೀಶ್ ಪೂಂಜ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಸಕ್ತ ವರ್ಷದ ಜ್ಞಾನದೀಪ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುವುದು ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್‌ಕುಮಾರ್ ಎಸ್.ಎಸ್. ತಿಳಿಸಿದ್ದಾರೆ.

ವಿಶೇಷ ಸೌಲಭ್ಯಗಳು: 2,75,177 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ “ಶ್ರೀ ಸಾನ್ನಿಧ್ಯ” ಸರತಿಸಾಲಿನ ಸಂಕೀರ್ಣ ಎರಡು ಅಂತಸ್ತುಗಳನ್ನು ಹೊಂದಿದ್ದು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಭಕ್ತಾದಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ. ಹತ್ತು ಸಾವಿರ ಜನರಿಗೆ ಆರಾಮದಾಯಕ  ಆಸನ ವ್ಯವಸ್ಥೆ, ವೃದ್ಧರು, ಅಂಗವಿಕಲರು ಮತ್ತು ಮಕ್ಕಳ ಆರೈಕೆ ಕೇಂದ್ರ, ವೈದ್ಯಕೀಯ ನೆರವು, ಶೌಚಾಲಯ, ಉಪಾಹಾರ ಸೌಲಭ್ಯ, ದೂರದರ್ಶನ ಸಹಿತ ಹವಾನಿಯಂತ್ರಿತ ಸೌಲಭ್ಯ ಕಲ್ಪಿಸಲಾಗಿದೆ. ದರ್ಶನದ ಸಮಯದಲ್ಲಿ ವಿವಿಧ ಸೇವೆಗಳ ಮಾಹಿತಿ ಪಡೆಯಲು ಡಿಜಿಟಲ್ ತಂತ್ರಜ್ಞಾನ ಅಳವಡಿಸಲಾಗಿದೆ. ಕಟ್ಟಡಕ್ಕೆ ಸಂಪೂರ್ಣ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದ್ದು, ಮರುಬಳಕೆಯ ಸೋಲಾರ್ ಇಂಧನ ಅಳವಡಿಸಲಾಗಿದೆ. ಪ್ರತಿ ಭವನದಲ್ಲಿ 800 ಮಂದಿ ತಂಗಲು ಅವಕಾಶವಿರುವ 16 ವಿಶಾಲ ಭವನಗಳು “ಶ್ರೀ ಸಾನ್ನಿಧ್ಯ” ದಲ್ಲಿವೆ. ಅಲ್ಲಲ್ಲಿ ಸೂಚನಾ ಫಲಕಗಳು ಹಾಗೂ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಸಂಕೀರ್ಣದ ಪ್ರವೇಶದ್ವಾರದ ಎದುರು ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಬಿಂಬಿಸುವ ಆಕರ್ಷಕ ಕಲಾಕೃತಿಗಳು ಕಣ್ಮನ ಸೆಳೆಯುತ್ತವೆ. ದೇವರ ದರ್ಶನಕ್ಕೆ ಪ್ರಸ್ತುತ ಇರುವ ಸರತಿಸಾಲಿನ ವ್ಯವಸ್ಥೆಯನ್ನೂ ಕೆಲವು ಸುಧಾರಣೆಗಳೊಂದಿಗೆ ಮುಂದುವರಿಸಲಾಗುವುದು ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular