ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಮೂಡುಬಿದಿರೆ ಘಟಕದ ವತಿಯಿಂದ ನಡೆದ ಗುರುಸ್ಮರಣೆ ಕಾರ್ಯಕ್ರಮದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ, ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಐಡಿ ಹಾಗೂ ವಿದ್ಯಾರ್ಥಿ ವೇತನ ವಿತರಿಸುವ ಕಾರ್ಯಕ್ರಮವು ಬ್ರಹ್ಮಶ್ರೀ ಗುರುನಾರಾಯಣಸ್ವಾಮಿ ಸೇವಾ ಸಂಘ (ರಿ)ದಲ್ಲಿ ಭಾನುವಾರ ನಡೆಯಿತು.
ಉದ್ಯಮಿ ನಾರಾಯಣ ಪಿ.ಎಂ.ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಮಯಪ್ರಜ್ಞೆಯನ್ನು ಅಳವಡಿಕೊಂಡಾಗ ಸಾಧನೆಗಳನ್ನು ಮಾಡಲು ಸಾಧ್ಯವಿದೆ. ಯುವವಾಹಿನಿ ಘಟಕವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆಯಲ್ಲದೆ ಅಸಕ್ತರಿಗೆ ಪ್ರೋತ್ಸಾಹವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಮೂಡುಬಿದಿರೆ ಯುವವಾಹಿನಿ(ರಿ) ಘಟಕದ ಅಧ್ಯಕ್ಷ ಶಂಕರ್ ಎ.ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಘಟಕವು ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವವರಿಗೆ ವೇದಿಕೆಯನ್ನು ಕಲ್ಪಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಸಂಪರ್ಕಿಸಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿದಂತೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದೆ. ಯುವ ಸ್ಪಂದನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದ ಅವರು ಗುರುತಿಸಿ ಕಳೆದ 8 ತಿಂಗಳಿನಿಂದ ಜನಪರವಾದ 43 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮಂಗಳೂರು ಸೆಂಟ್ ಅಲೋಶಿಯಸ್ ಪರಿಗಣಿತ ವಿವಿಯ ವಿಭಾಗ ಮುಖ್ಯಸ್ಥ ಡಾ.ರಾಕೇಶ್ ಕುಮಾರ್, ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘ (ರಿ) ಇದರ ಅಧ್ಯಕ್ಷ ಸುರೇಶ್ ಕೆ.ಪೂಜಾರಿ, ರೋಟರಿ ಜಿಲ್ಲೆ 3181ರ ವಲಯ ಸೇನಾನಿ ಪ್ರವೀಣ್ ಪಿರೇರಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿ ವೇತನ : 40 ವಿದ್ಯಾರ್ಥಿಗಳಿಗೆ ರೂ 1.20 ಲಕ್ಷ ರೂ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿರುವ 55 ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಹೊಸದಾಗಿ ಸೇರ್ಪಡೆಗೊಂಡ 106 ಸದಸ್ಯರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಗೌರವ : ಪುರಸಭೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ನಾಗರಾಜ ಪೂಜಾರಿ ಮತ್ತು ಬಹುಮುಖ ಬಾಲ ಪ್ರತಿಭೆ ಸುನೀಕ್ಷಾ ಅವರನ್ನು ಗೌರವಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕ ಯೋಗೀಶ್ ಕೈರೋಡಿ, ಘಟಕದ ಯುವಸ್ಪಂದನ ಸೇವಾ ಯೋಜನೆಯ ಅಧ್ಯಕ್ಷ ನವಾನಂದ ಉಪಸ್ಥಿತರಿದ್ದರು.
ಸುಧಾಕರ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಿರೀಶ್ ವಂದಿಸಿದರು.