Thursday, April 24, 2025
Homeಉಡುಪಿರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ, ಅಹವಾಲು ಸಲ್ಲಿಕೆ

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಬೃಹತ್ ಪ್ರತಿಭಟನೆ, ಅಹವಾಲು ಸಲ್ಲಿಕೆ

ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡುವ ತುಷ್ಟೀಕರಣದ ನಿರ್ಧಾರ ತಳೆದ ರಾಜ್ಯ ಕಾಂಗ್ರೆಸ್ ಸರ್ಕಾರದ ಸಂವಿಧಾನ ವಿರೋಧಿ ನಿಲುವನ್ನು ಖಂಡಿಸಿ ಹಾಗೂ ಈ ವಿಚಾರವನ್ನು ಹನಿಟ್ರ್ಯಾಪ್ ಪ್ರಕರಣದ ಜೊತೆಗೆ ಸದನದಲ್ಲಿ ಪ್ರಶ್ನಿಸಿದ 18 ಮಂದಿ ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಸ್ಪೀಕರ್ ಕ್ರಮವನ್ನು ಖಂಡಿಸಿ, ಮುಸ್ಲಿಂ ತುಷ್ಟೀಕರಣಕ್ಕಾಗಿ ಅಗತ್ಯ ಬಿದ್ದರೆ ಸಂವಿಧಾನ ಬದಲಾಗುತ್ತದೆ ಎಂಬ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ದೇಶ ವಿರೋಧಿ ಹೇಳಿಕೆಯನ್ನು ಖಂಡಿಸಿ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂಬಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಕರ್ನಾಟಕ ವಿಧಾನ ಸಭೆಯಲ್ಲಿ ವಿಧಾನ ಸಭಾಧ್ಯಕ್ಷರು ಬಿಜೆಪಿಯ 18 ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿರುವುದು ಸಂಪೂರ್ಣವಾಗಿ ಕಾನೂನುಬಾಹಿರ, ಅಸಾಂವಿಧಾನಾತ್ಮಕ, ಏಕಪಕ್ಷೀಯ ಹಾಗೂ ಮನಸೋಇಚ್ಛೆಯಿಂದ ತೆಗೆದುಕೊಂಡ ತೀರ್ಮಾನವಾಗಿದೆ. ಈ ನಿರ್ಧಾರ ಜನತೆಯಿಂದ ಆಯ್ಕೆಯಾದ ಶಾಸಕರಿಗೆ ಅಷ್ಟೇ ಅಲ್ಲದೆ ಕ್ಷೇತ್ರದ ಮತದಾರರಿಗೂ ಮಾಡಿದ ಘೋರ ಅವಮಾನವಾಗಿದೆ. ವಿಧಾನಸಭಾ ಸ್ಪೀಕರ್ ಅವರ ಅಸಾಂವಿಧಾನಿಕ, ಸರ್ವಾಧಿಕಾರಿ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಹಾಗೂ ವಿಧಾನ ಸಭಾಧ್ಯಕ್ಷರು ತಮ್ಮ ತೀರ್ಮಾನವನ್ನು ಮರು ಪರಿಶೀಲಿಸಿ ಅಮಾನತು ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಆಗ್ರಹಪಡಿಸುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದರು.

ಕಾಂಗ್ರೆಸ್ ಮತ್ತೊಮ್ಮೆ ತುಷ್ಟೀಕರಣದ ತನ್ನ ಹಳೇ ಚಾಳಿಯನ್ನು ಮುಂದುವರಿಸಿದೆ. ಸಾರ್ವಜನಿಕ ಗುತ್ತಿಗೆಯಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದು, ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸ್ಲಿಂ ವಿದ್ಯಾರ್ಥಿಗಳಿಗೆ ನೀಡುವ ಸಹಾಯ ಧನವನ್ನು 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಿರುವುದು, ಶಾದಿ ಭಾಗ್ಯಕ್ಕೆ ಹಣ ನೀಡುವ ನಿರ್ಧಾರ ತೆಗೆದುಕೊಂಡಿರುವುದು ಮತ್ತು ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಆತ್ಮರಕ್ಷಣೆಗಾಗಿ ವಿಶೇಷ ಅನುದಾನವನ್ನು ನೀಡುವುದು ಕಾಂಗ್ರೆಸ್‌ನ ಅತಿಯಾದ ತುಷ್ಟೀಕರಣ ರಾಜಕಾರಣದ ಮುಂದುವರಿದ ಭಾಗವಾಗಿದೆ. ರಾಜ್ಯ ಕಾಂಗ್ರೆಸ್ ಸರಕಾರದ ಈ ನಿರ್ಧಾರವನ್ನು ಬಿಜೆಪಿ ಜಿಲ್ಲಾ ಘಟಕವು ತೀವ್ರವಾಗಿ ವಿರೋಧಿಸುತ್ತದೆ ಎಂದು ಅವರು ತಿಳಿಸಿದರು.

ಡಾ! ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಯಾವುದೇ ಅವಕಾಶವಿಲ್ಲ. ಇದಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್ ಸಹಿತ ವಿವಿಧ ಕೋರ್ಟ್‌ಗಳೂ ತೀರ್ಪು ಕೊಟ್ಟಿವೆ. ಆದರೂ ಈ ರೀತಿಯ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್‌ನ ನಡೆ ಡಾ! ಅಂಬೇಡ್ಕರ್‌ ಅವರ ಸಂವಿಧಾನಕ್ಕೆ ಕಾಂಗ್ರೆಸ್ ಮಾಡಿರುವ ಘೋರ ಅಪಮಾನವಾಗಿದೆ. ಬಹುಸಂಖ್ಯಾತ ಹಿಂದೂಗಳ ಹಿತಕ್ಕೆ ವಿರುದ್ಧವಾಗಿ ತೆಗೆದುಕೊಂಡಿರುವ ಈ ಸಂವಿಧಾನ ಬಾಹೀರ ನಿರ್ಧಾರಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡಲೇ ಹಿಂದಕ್ಕೆ ಸರಿಯಬೇಕು. ಇದಕ್ಕೆ ಪೂರಕವೆಂಬಂತೆ ಮುಸ್ಲಿಂ ತುಷ್ಟೀಕರಣಕ್ಕಾಗಿ ಅಗತ್ಯ ಬಿದ್ದರೆ ಸಂವಿಧಾನ ಬದಲಾಗುತ್ತದೆ ಎಂಬ ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಅಗ್ರಹಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಬಿತ್ತಿ ಪತ್ರಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಅಹವಾಲು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪಕ್ಷದ ಮುಖಂಡರುಗಳಾದ ರಾಜೇಶ್ ಕಾವೇರಿ, ಸದಾನಂದ ಉಪ್ಪಿನಕುದ್ರು, ಮಹಾವೀರ ಹೆಗ್ಡೆ, ರತ್ನಾಕರ್ ಇಂದ್ರಾಳಿ, ಶಿವಕುಮಾರ್ ಅಂಬಲಪಾಡಿ, ರಾಘವೇಂದ್ರ ಕುಂದರ್, ಶ್ರೀಕಾಂತ್ ನಾಯಕ್, ಉದಯ ಕೋಟ್ಯಾನ್, ವಿಜಯ ಕುಮಾರ್ ಉದ್ಯಾವರ, ಶ್ರೀನಿಧಿ ಹೆಗ್ಡೆ, ಗಿರೀಶ್ ಎಮ್. ಅಂಚನ್, ಪ್ರಿಯದರ್ಶಿನಿ ದೇವಾಡಿಗ, ವಿಜಯ ಕೊಡವೂರು, ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸಂಧ್ಯಾ ರಮೇಶ್, ಕಮಲಾಕ್ಷ ಹೆಬ್ಬಾರ್, ರುಡಾಲ್ಫ್ ಡಿಸೋಜ, ದಿನೇಶ್ ಅಮೀನ್, ಜಿತೇಂದ್ರ ಶೆಟ್ಟಿ, ಸುರೇಶ್ ಶೆಟ್ಟಿ ಗೋಪಾಡಿ, ಜಗದೀಶ್ ಆಚಾರ್ಯ ಕಪ್ಪೆಟ್ಟು, ಶ್ರೀಕಾಂತ್ ಕಾಮತ್, ನಳಿನಿ ಪ್ರದೀಪ್ ರಾವ್, ಪುಷ್ಪರಾಜ್ ಶೆಟ್ಟಿ, ಸುಧೀರ್ ಕೆ.ಎಸ್., ಕೆ. ದಿವಾಕರ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಗೋಪಾಲ್ ಕಾಂಚನ್, ಶ್ರೀವತ್ಸ, ನಿತಿನ್ ಪೈ ಹಾಗೂ ಉಡುಪಿ ನಗರಸಭಾ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular