ಗರ್ಭಕೋಶ ಕ್ಯಾನ್ಸರ್ ನಿರ್ಮೂಲನಕ್ಕೆ ಒತ್ತು ನೀಡಲು ಕರೆ
ಮೂಡುಬಿದಿರೆ: ರೋಟರಿ ಜಿಲ್ಲೆ 3181ರ ಜಿಲ್ಲಾ ರಾಜ್ಯಪಾಲ ರೊ. ರಾಮಕೃಷ್ಣ ಪಿ.ಕೆ.ಯವರು ಡಿ. 12ರಂದು ರೋಟರಿ ಕ್ಲಬ್ ಆಫ್ ಮೂಡುಬಿದ್ರಿ ಮಿಡ್ ಟೌನ್ ಗೆ ಅಧಿಕೃತ ಭೇಟಿ ನೀಡಿದರು. ಈ ಸಂದರ್ಭ ಅವರು ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಸೇವಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಸಂತೃಪ್ತಿ ವ್ಯಕ್ತಪಡಿಸಿದರು.
ನಂತರ ಸಂಜೆ ಇಲ್ಲಿನ ಸಮಾಜ ಮಂದಿರ ಸಭಾದ ಮಿನಿ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 2.6 ಬಿಲಿಯನ್ ಡಾಲರ್ ವೆಚ್ಚ ಮಾಡಿ, 3 ಬಿಲಿಯನ್ ಮಕ್ಕಳನ್ನು ಪೋಲಿಯೋ ಪಿಡುಗಿನಿಂದ ರಕ್ಷಿಸುವ ಮೂಲಕ ಅಂತರಾಷ್ಟ್ರೀಯ ರೋಟರಿ ಸಂಸ್ಥೆ ವಿಶ್ವಕ್ಕೆ ತನ್ನ ಇರುವಿಕೆಯನ್ನು ತೋರಿಸಿಕೊಟ್ಟಿದೆ. ಈಗ ಮಹಿಳೆಯರ ಗರ್ಭಕಂಠದ ಕ್ಯಾನ್ಸರ್ ಮಹಾಮಾರಿಯಾಗಿ ವಿಶ್ವವನ್ನು ಕಾಡುತ್ತಿದ್ದು, ಉಚಿತ ಲಸಿಕೆ ನೀಡಿ ಇದರ ನಿರ್ಮೂಲನೆಗೆ ರೋಟರಿ ಸಂಸ್ಥೆ ಪಣ ತೊಟ್ಟಿದ್ದರೂ ಮಾಹಿತಿಯ ಕೊರತೆ ರೋಟರಿಯ ಈ ಅಭಿಯಾನಕ್ಕೆ ತೊಡಕಾಗಿ ಪರಿಣಮಿಸಿದ್ದು, ರೋಟರಿ ಕ್ಲಬ್‌ಗಳು ಜಾಗೃತಿ ಶಿಬಿರಗಳನ್ನು ಹಮ್ಮಿಕೊಂಡು , ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಸರಿಯಾದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಿ, ರೋಟರಿಯ ಈ ಮಹಾ ಅಭಿಯಾನವನ್ನು ಯಶಸ್ಸಿಗೊಳಿಸಬೇಕು ಎಂದು ಕರೆ ನೀಡಿದರು.

ಮಿಡ್ ಟೌನ್ ರೋಟರಿ ಅಧ್ಯಕ್ಷ ರೊ. ಕರುಣಾಕರ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ವಲಯ 1ರ ಅಸಿಸ್ಟೆಂಟ್ ಗವರ್ನರ್ ರೊ. ರೋಬರ್ಟ್ ಪ್ರ್ಯಾಂಕ್ಲಿನ್ ರೇಗೋ, ವಲಯ ಸೇನಾನಿ ರೊ. ತ್ಯಾಗರಾಜ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. 24 ಗಂಟೆ ನಿರಂತರ ಗಾಯನದ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧಕ ವಿದ್ವಾನ್ ಯಶವಂತ್ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ, ಸಮಾಜಸೇವಕ ಸುಧಾಕರ ಸಾಲ್ಯಾನ್ ಸಂಕಲಕರಿಯ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಜಿಲ್ಲಾ ರಾಜ್ಯಪಾಲರನ್ನು ಗೌರವಿಸಲಾಯಿತು. ಕ್ಲಬ್ ಕಾರ್ಯದರ್ಶಿ ಮುರಳೀಧರ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ವಿದೇಶ್ ಎಂ. ಉಪಸ್ಥಿತರಿದ್ದರು. ಪುಷ್ಪರಾಜ್ ಜೈನ್, ವಿದೇಶ್ ಎಂ., ಸುಶಾಂತ್ ಕರ್ಕೇರಾ ಅತಿಥಿಗಳನ್ನು ಗೌರವಿಸಿದರು. ಮಹೇಂದ್ರ ಕುಮಾರ್ ಮತ್ತು ಅಭಿನಂದನ್ ಬಲ್ಲಾಳ್ ಸನ್ಮಾನಪತ್ರ ವಾಚಿಸಿದರು.
ಕರುಣಾಕರ ದೇವಾಡಿಗ ಸ್ವಾಗತಿಸಿದರು. ಪದ್ಮಾವತಿ ಶೆಟ್ಟಿ ಪ್ರಾರ್ಥಿಸಿದರು. ಮಹಮ್ಮದ್ ಅಸ್ಲಂ, ಪ್ರತಾಪ್ ಕುಮಾರ್, ಕುಮಾರ್ ಪೂಜಾರಿ, ಹರಿಪ್ರಸಾದ್, ರೇಖಾ ಭಂಡಾರಿ ಸಹಕರಿಸಿದರು. ಪ್ರಶಾಂತ್ ಭಂಡಾರಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಮುರಳೀಧರ ಕೋಟ್ಯಾನ್ ವರದಿ ವಾಚಿಸಿ ವಂದಿಸಿದರು.


