ತಿರುವನಂತಪುರಂ: ಕೆಲವೊಮ್ಮೆ ನಾವು ಕೆಲವೊಂದು ವೃತ್ತಿಯಲ್ಲಿ ಎಷ್ಟೇ ಪರಿಣತಿ ಹೊಂದಿದ್ದರೂ, ಅದಕ್ಕೆ ಸಂಬಂಧಿಸಿದ ಸಣ್ಣ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಪರದಾಡುತ್ತಿರುತ್ತೇವೆ. ಆ ಕ್ಷಣ ಯಾರೋ ಒಬ್ಬರು ಬಂದು ಅದನ್ನು ಬಗೆಹರಿಸಿದಾಗ, ಇಷ್ಟು ಸಣ್ಣ ವಿಚಾರಕ್ಕೆ ನಾನು ಇಷ್ಟೊಂದು ತಲೆ ಕೆಡಿಸಿಕೊಂಡೆನಾ ಎಂದು ಅಚ್ಚರಿಪಡುವಂತಾಗುವ ಹಲವಾರು ಕ್ಷಣಗಳು ನಮ್ಮ ಜೀವನದಲ್ಲಿ ಬರುತ್ತಿರುತ್ತದೆ. ಅಂತಹುದೇ ಒಂದು ಅನುಭವ ವೈದ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ಈಗ ದೊಡ್ಡ ಸುದ್ದಿಯಾಗಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 17 ವರ್ಷ ಅನುಭವ ಹೊಂದಿದ್ದ ಕೇರಳದ ವೈದ್ಯರೊಬ್ಬರು ರೋಗಿಯೊಬ್ಬರ ರೋಗ ನಿರ್ಣಯ ಮಾಡುವಲ್ಲಿ ವಿಫಲರಾಗಿ ತುಂಬಾ ತಲೆ ಕೆಡಿಸಿಕೊಂಡಿದ್ದರು. ಆದರೆ ಅವರ ಮನೆಕೆಲಸದಾಕೆ ಅದನ್ನು ಕೇವಲ 10 ಸೆಕೆಂಡ್‌ಗಳಲ್ಲಿ ಬಗೆಹರಿಸಿದ್ದು, ಅವರಿಗೆ ಅಚ್ಚರಿಯನ್ನು ಮೂಡಿಸಿದೆ. ಪ್ರತಿಯೊಬ್ಬರಿಂದ ನಾವು ಏನನ್ನಾದರೂ ಕಲಿಯಲಿರುತ್ತದೆ ಎಂಬ ಅಂಶವನ್ನು ಅವರು ಬಹಿರಂಗಪಡಿಸಿದ್ದಾರೆ.
ಲಿವರ್ ವೈದ್ಯರೆಂದೇ ಖ್ಯಾತರಾಗಿದ್ದ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಎಂಬವರು ಕುಟುಂಬ ಸದಸ್ಯರಲ್ಲೊಬ್ಬರ ರೋಗ ನಿರ್ಣಯ ಪತ್ತೆ ಹಚ್ಚಲಾಗದೆ ತಲೆ ಕೆಡಿಸಿಕೊಂಡಿದ್ದರು. ಇದ್ದ ಎಲ್ಲಾ ಪರೀಕ್ಷೆಗಳನ್ನು ಮಾಡಿದ್ದರೂ ಅವರಿಗೆ ನೆಗೆಟಿವ್ ಬಂದಿತ್ತು. ಇದು ವೈದ್ಯರನ್ನು ವಿಪರೀತವಾಗಿ ಕಾಡಿತ್ತು.
ಆದರೆ ಮನೆ ಕೆಲಸದಾಕೆಯ ಮುಂದೆ ಈ ವಿಚಾರ ಮಾತನಾಡಿದಾಗ, ಮನೆಗೆಲಸದವರು ನನ್ನ ಮೊಮ್ಮಕ್ಕಳಲ್ಲಿ ಇಂತಹುದೇ ರೋಗ ಲಕ್ಷಣ ಕಂಡುಬಂದಿದ್ದು, ಸ್ಥಳೀಯ ಭಾಷೆಯಲ್ಲಿ ಅದನ್ನು ಅಂಜಾಪನಿ ಎಂದು ಹೇಳುತ್ತಾರೆ ಎಂದರು. ಅದರಂತೆ ವೈದ್ಯರು ಪಾರ್ವೊವೈರಸ್ ಬಿ 19 ಟೆಸ್ಟ್ ಮಾಡಿಸಿದಾಗ ಅದು ಪಾಸಿಟಿವ್ ಬಂದಿತು ಎಂದು ವೈದ್ಯರು ತಿಳಿಸಿದ್ದಾರೆ.
17 ವರ್ಷದ ವೈದ್ಯಕೀಯ ಅನುಭವ ನನ್ನ ಮನೆ ಕೆಲಸದಾಕೆಯ ಜ್ಞಾನದ ಮುಂದೆ ಏನೂ ಇಲ್ಲ ಎಂದು ವೈದ್ಯರು ಬರೆದುಕೊಂಡಿದ್ದಾರೆ. ವೈದ್ಯರ ಎಕ್ಸ್ ಪೋಸ್ಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ.
17 ವರ್ಷ ಅನುಭವವಿದ್ದ ವೈದ್ಯರು ಕಂಡು ಹಿಡಿಯಲಾಗದ ರೋಗವನ್ನು 10 ಸೆಕೆಂಡ್‌ನಲ್ಲಿ ಕಂಡು ಹಿಡಿದ ಮನೆ ಕೆಲಸದಾಕೆ!
RELATED ARTICLES