Monday, July 15, 2024
HomeUncategorizedಮಾಹೆಯ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರಕ್ಕೆ ಲಾಸ್‌ ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್‌ ಕಲ್ಚರ್‌ ಫಿಲ್ಮ್‌ ಫೆಸ್ಟಿವಲ್‌-2024ರಲ್ಲಿ ಸೆಮಿಫೈನಲ್‌...

ಮಾಹೆಯ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರಕ್ಕೆ ಲಾಸ್‌ ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್‌ ಕಲ್ಚರ್‌ ಫಿಲ್ಮ್‌ ಫೆಸ್ಟಿವಲ್‌-2024ರಲ್ಲಿ ಸೆಮಿಫೈನಲ್‌ ಸ್ಥಾನ


ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ]ಯ ಅಂತರ್‌ಸಾಂಸ್ಕೃತಿಕ ಅಧ್ಯಯನ ಮತ್ತು ಸಂವಾದ ಕೇಂದ್ರ [ಸೆಂಟರ್‌ ಫಾರ್‌ ಇಂಟರ್‌ಕಲ್ಚರಲ್‌ ಸ್ಟಡೀಸ್‌ ಆಯಂಡ್‌ ಡಯಲಾಗ್‌-ಸಿಐಎಸ್‌ಡಿ]ವು ಸಿದ್ಧಪಡಿಸಿದ ಕರಾವಳಿ ಕರ್ನಾಟಕದ ಪಾರಂಪರಿಕ ಕಲೆಯಾದ ಯಕ್ಷಗಾನದ ಕುರಿತ ಸಾಕ್ಷ್ಯಚಿತ್ರವು ಯುಎಸ್‌ಎಯ ಲಾಸ್‌ಏಂಜಲೀಸ್‌ನ ಪ್ರತಿಷ್ಠಿತ ವರ್ಲ್ಡ್‌ ಕಲ್ಚರ್‌ ಪಿಲ್ಮ್‌ ಫೆಸ್ಟಿವಲ್‌-2024 ರಲ್ಲಿ ಅಂತಿಮಪೂರ್ವ ಸ್ಪರ್ಧಾ ವಿಜೇತ ಸ್ಥಾನ [ಸೆಮಿ ಫೈನಲ್‌ ಸ್ಟೇಟಸ್‌] ಕ್ಕೆ ಆಯ್ಕೆಯಾಗಿದೆ. ಈ ಚಿತ್ರೋತ್ಸವವು ಜುಲೈ 27 ಮತ್ತು 28, 2024 ರಂದು ನಡೆಯಲಿದೆ.
ಈ ಸಾಕ್ಷ್ಯಚಿತ್ರವನ್ನು ಸಿಐಎಸ್‌ಡಿಯ ‘ತುಳುನಾಡಿನ ಸಜೀವ ಸಂಸ್ಕೃತಿಗಳು : ಭಾರತದ ಅರಿವು’ [ಡಿಸರ್ನಿಂಗ್‌ ಇಂಡಿಯ: ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು] ಯೋಜನೆಯ ಭಾಗವಾಗಿ ತಯಾರಿಸಲಾಗಿದೆ. ಈ ಚಿತ್ರೋತ್ಸವಕ್ಕೆ ಸುಮಾರು 40 ದೇಶಗಳಿಂದ ಸಾಂಸ್ಕೃತಿಕ ಮಹತ್ವ ಮತ್ತು ಅಮೂಲ್ಯ ದಾಖಲೆಗಳಾಗಿರುವ ಪ್ರವೇಶಗಳು ಬಂದಿದ್ದು, ಪ್ರಸ್ತುತ ಈ ಸಾಕ್ಷ್ಯಚಿತ್ರವು ಕರ್ನಾಟಕದ ಕರಾವಳಿ ಜಿಲ್ಲೆಗಳ ಮತ್ತು ಕೇರಳದ ಕಾಸರಗೋಡು ಜಿಲ್ಲೆಯ ಪ್ರಾದೇಶಿಕ ಕಲೆಯಾದ ಯಕ್ಷಗಾನದ ಭವ್ಯ ಪರಂಪರೆಯನ್ನು ಎತ್ತಿಹಿಡಿಯುತ್ತದೆ.
ಮಾಹೆಯ ಐರೋಪ್ಯ ಅಧ್ಯಯನ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಐಎಸ್‌ಡಿಯ ಉಪಕ್ರಮ [ಇನಿಶಿಯೇಟಿವ್‌] ವಾಗಿ ‘ಡಿಸರ್ನಿಂಗ್‌ ಇಂಡಿಯ : ಲಿವಿಂಗ್‌ ಕಲ್ಚರ್ಸ್‌ ಆಫ್‌ ತುಳುನಾಡು’ ಯೋಜನೆ ಕ್ರಿಯಾಶೀಲವಾಗಿದ್ದು, ಇದು ಅಂತರ್‌ಸಾಂಸ್ಕೃತಿಕ ಸಂವಾದ ಮತ್ತು ಅರಿವನ್ನು ವಿಸ್ತರಿಸುವಲ್ಲಿ ಆಶಯದತ್ತ ಕೇಂದ್ರೀಕೃತವಾಗಿದೆ. ಈ ಪ್ರಶಸ್ತಿ ಪುರಸ್ಕೃತ ಸಾಕ್ಷ್ಯಚಿತ್ರವು ಸ್ಥಳೀಯ ಸಾಂಸ್ಕೃತಿಕ ಜ್ಞಾನ ಮತ್ತು ಅನನ್ಯ ಪರಂಪರೆಯನ್ನು ದಾಖಲಿಸುವ ಪ್ರಮುಖ ಪ್ರಯತ್ನವಾಗಿದೆ. ಈವರೆಗೆ ವಿವಿಧ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸುಮಾರು 11 ಬಾರಿ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್‌. ಎಸ್‌. ಬಲ್ಲಾಳ್‌ ಈ ಸಾಧನೆಯ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸುತ್ತ, ‘ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ದೊರೆತ ಮನ್ನಣೆಯು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ, ಬೆಳೆಸುವ ಮಾಹೆಯ ಬದ್ಧತೆಗೆ ದೊರೆತ ಮಾನ್ಯತೆಯೆಂದು ಭಾವಿಸುತ್ತೇವೆ. ಈ ಸಾಕ್ಷ್ಯಚಿತ್ರವು ಪಾರಂಪರಿಕ ಕಲೆಯೊಂದರ ಅಮೂಲ್ಯ ದಾಖಲಾತಿಯಷ್ಟೇ ಅಲ್ಲ, ಮಾಹೆಯಲ್ಲಿರುವ ಸಂಶೋಧನ ತಂಡದ ಸಮೂಹ ಪ್ರಯತ್ನಕ್ಕೆ ಸಾಕ್ಷಿಯಾಗಿದೆ’ ಎಂದರು.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ; ವೆಂಕಟೇಶ್‌ ಅವರು, ‘ಈ ಅಂತಾರಾಷ್ಟ್ರೀಯ ಮನ್ನಣೆ ದೊರೆತ ಬಗ್ಗೆ ಅಭಿಮಾನವೆನ್ನಿಸುತ್ತದೆ. ಇದು ಅಂತರ್‌ಸಾಂಸ್ಕೃತಿಕ ಸಂವಾದ ಮತ್ತು ಅರಿವನ್ನು ಹೆಚ್ಚಿಸುವ ನಮ್ಮ ಕ್ರಿಯಾಶೀಲತೆಯ ದ್ಯೋತಕವಾಗಿದೆ. ಈ ಸಾಕ್ಷ್ಯಚಿತ್ರದ ಮೂಲ ನಮ್ಮ ಭವ್ಯ ಪರಂಪರೆಯ ಕಥನಗಳು ಇಡೀ ಜಗತ್ತಿಗೆ ತಲುಪುವಂತಾಗಿವೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ತೌಳವ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸುವಲ್ಲಿ ಮಾಹೆಯು ಪ್ರಮುಖ ಪಾತ್ರವನ್ನು ವಹಿಸುತ್ತಿದೆ’ ಎಂದರು.
ಪ್ರಸ್ತುತ ಸಾಕ್ಷ್ಯಚಿತ್ರವನ್ನು ಡಾ. ಪ್ರವೀಣ್‌ ಶೆಟ್ಟಿ ಮತ್ತು ನಿತೇಶ್‌ ಅಂಚನ್‌ ನಿರ್ದೇಶಿಸಿದ್ದಾರೆ ಈ ಸಾಕ್ಷ್ಯಚಿತ್ರವು ಪಾರಂಪರಿಕ ಕಲಾ ಮಾಧ್ಯಮದ ಬಹುಮುಖ ಪ್ರಸ್ತುತತೆಯನ್ನು ಮತ್ತು ಸ್ಥಳೀಯ ಸಂಸ್ಕೃತಿಯಲ್ಲಿ ಅದರ ಪ್ರಾಮುಖ್ಯವನ್ನು ಎತ್ತಿಹಿಡಿಯುತ್ತದೆ. ಈ ಹಿಂದೆ ವಾರಾಣಸಿಯ ಸಾಂಸ್ಕೃತಿಕ ಪ್ರವಾಸೋದ್ಯಮದ ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದಲ್ಲಿ ಈ ಚಿತ್ರವು ತೀರ್ಪುಗಾರರ ಪ್ರಶಸ್ತಿ [ಜೂರಿ ಅವಾರ್ಡ್‌] ಪಡೆದಿರುವುದು ಮತ್ತು ಹೊಸದಿಲ್ಲಿಯ ಯುಜಿಸಿಯ ಕನ್ಸೋರ್ಟಿಯಂ ಫಾರ್‌ ಎಜುಕೇಶನಲ್‌ ಕಮ್ಯುನಿಕೇಶನ್‌ [ಸಿಇಸಿ]ಯಲ್ಲಿ ಅತ್ಯುತ್ತಮ ಚಿತ್ರಕಥೆ [ಸ್ಕ್ರಿಪ್ಟ್‌ ರೈಟಿಂಗ್‌] ಬಹುಮಾನ ಗಳಿಸಿರುವುದು ಗಮನಾರ್ಹ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :
ಡೆಪ್ಯುಟಿ ಡೈರೆಕ್ಟರ್‌ ಸಾರ್ವಜನಿಕ ಸಂಪರ್ಕ ಮತ್ತು ಸಂವಹನ
ದೂರವಾಣಿ : 7338625909
ಇಮೇಲ್‌: [email protected]

RELATED ARTICLES
- Advertisment -
Google search engine

Most Popular