ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನವು ಪ್ರಾಚೀನವೂ ಪ್ರಸಿದ್ಧವೂ ಆಗಿರುವ ಕಾರಣಿಕ ಕ್ಷೇತ್ರವಾಗಿದೆ. ಮಾಯಿಪ್ಪಾಡಿ ಅರಮನೆಯ ರಾಜರು ಈ ದೇವಾಲಯದ ಅನುವಂಶಿಕ ಮೊಕ್ತೇಸರರಾಗಿರುವರು. ಶ್ರೀ ಮದನಂತೇಶ್ವರ ಹಾಗೂ ಶ್ರೀ ಸಿದ್ಧಿ ವಿನಾಯಕ ದೇವರು ಇಲ್ಲಿನ ಪ್ರಧಾನ ದೇವರುಗಳು. ಶ್ರೀ ಸುಬ್ರಹ್ಮಣ್ಯ, ದುರ್ಗೆ, ಶಾಸ್ತಾರ,ಕಾಶಿ ವಿಶ್ವನಾಥ, ಹಂಸರೂಪಿ ಸದಾಶಿವ, ವೀರಭದ್ರ, ಬೀಣಾಳ್ವ,ನಾಗ ಮೊದಲಾದ ದಿವ್ಯ ಸಾನಿಧ್ಯಗಳು ಇಲ್ಲಿವೆ. ಗೋಡೆಯಿಂದ ಮೂಡಿ ಬಂದ ಸಿದ್ಧಿವಿನಾಯಕನ ವಿಗ್ರಹವೇ ಭಕ್ತ ಜನರ ಪ್ರಧಾನ ಆಕರ್ಷಣಾ ಬಿಂದುವಾಗಿದೆ. ಭಿತ್ತಿಗೆ ಅಂಟಿಕೊಂಡಿರುವ ಮೃನ್ಮಯಿ ವಿಗ್ರಹವು ಈಗಲೂ ಬೆಳೆಯುತ್ತಾ ಇದೆ ಎಂಬುದು ಭಕ್ತರ ನಂಬಿಕೆ ತುಪ್ಪದಿಂದ ತಯಾರಿಸುವ ಅಪ್ಪವೂ, ಪಚ್ಚಪ್ಪವೂ ಸಿದ್ಧಿವಿನಾಯಕನಿಗೆ ಇಷ್ಟವಾದ ನೈವೇದ್ಯಗಳಾಗಿವೆ. ಉದಯಾಸ್ತಮಾನವೂ ಇಲ್ಲಿನ ಪ್ರಧಾನ ಸೇವೆಯಾಗಿದೆ.ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಮತ್ತು ಮೂಡಪ್ಪ ಸೇವೆಗೆ ಬೆಂಗಳೂರು ರಾಮರಾಜ ಕ್ಷತ್ರಿಯ
ಕೋಟೆಯಾರ್ ರಾಮಕ್ಷತ್ರಿಯ ಸಮಾಜದ ದೇಣಿಗೆ :-
ಕೇರಳ ಮತ್ತು ಕರ್ನಾಟಕ ರಾಜ್ಯದ ಇತಿಹಾಸ ಪ್ರಸಿದ್ಧವಾದ ಕಾಸರಗೋಡಿನ ಮಧೂರು ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನದ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಮತ್ತುಮೂಡಪ್ಪ ಸೇವೆಯು 2025 ಮಾರ್ಚ್ 27ರಿಂದ ಏಪ್ರಿಲ್ 7 ರ ತನಕ ಈ ಪುಣ್ಯಕಾರ್ಯವು ಊರ, ಪರವೂರ,ದೇಶ,ವಿದೇಶಗಳ ಸಮಸ್ತ ಭಕ್ತ ಜನರ ಸಹಭಾಗಿತ್ವದಲ್ಲಿ ನಡೆಯಬೇಕೆಂಬುದು ದೇವರ ಸಂಕಲ್ಪವಾಗಿರುವುದರಿಂದ ಈಗಾಗಲೇ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾಮಗಾರಿಯು ಭರದಿಂದ ನಡೆದಿರುತ್ತದೆ. ದೇವಸ್ಥಾನದ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಮತ್ತು ಮೂಡಪ್ಪ ಸೇವೆ ಕಾರ್ಯಕ್ರಮಗಳ ನಿರ್ವಹಣೆಗಾಗಿ ಸುಮಾರು 10 ಕೋಟಿ ರೂಪಾಯಿ ಖರ್ಚು ಅಂದಾಜಿಸಲಾಗಿದೆ.
ಈ ಸಂದರ್ಭದಲ್ಲಿ ಕಾಸರಗೋಡು ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸಮಾಜದ ಕುಟುಂಬ ದೇವಸ್ಥಾನ, ಕುಲದೇವರ ಮನೆ ಮತ್ತು ಸಂಘಟನೆಗಳ ಸಮನ್ವಯ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಮಾರ್ಗದರ್ಶಕರಾದ ಉಡುಪಿಯ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ.ನೇತೃತ್ವದಲ್ಲಿ 2025 ದಶಂಬರ್ 22 ರಂದು ಬೆಂಗಳೂರಿನ ರಾಮರಾಜ ಕ್ಷತ್ರಿಯ, ಕೋಟೆಯಾರ್, ರಾಮಕ್ಷತ್ರಿಯ ಸಮಾಜದ ದಾನಿಗಳಿಂದ ಈ ಪುಣ್ಯ ಕಾರ್ಯಕ್ಕೆ ಸುಮಾರು ಒಂದು ಲಕ್ಷ ರೂಪಾಯಿಯಷ್ಟು ದೇಣಿಗೆಯನ್ನು ಸಂಗ್ರಹಿಸಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬೆಂಗಳೂರಿಗೆ ತೆರಳಿದ ನಿಯೋಗದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ), ಕನ್ನಡಗ್ರಾಮ, ಕಾಸರಗೋಡು ಇದರ ಅಧ್ಯಕ್ಷ ಶಿವರಾಮ ಕಾಸರಗೋಡು ಹಾಗೂ ಮಧೂರು ದೇವಸ್ಥಾನದ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಗಿರೀಶ್ ಸಂಧ್ಯಾ, ಕೂಡ್ಲು ಜೊತೆ ಕಾರ್ಯದರ್ಶಿ ಮುರಳಿ ಗಟ್ಟಿ ಪರಕ್ಕಿಲ್ಲ, ಟಿ. ಡಿ. ಮುರಳಿ ಕುಮಾರ್ ಬಂದಡ್ಕ, ಸದಾಶಿವ ಶೆಟ್ಟಿ,ಮಂಜತ್ತೋಡಿ, ಮತ್ತು ಬೆಂಗಳೂರಿನ ಇಂಜಿನಿಯರ್ ಲೋಕೇಶ್ ವಿದ್ಯಾನಗರ, ಉದ್ಯಮಿ ಅಜಿತ್ ಕುಮಾರ್ ಅವರು ದಾನಿಗಳನ್ನು ಭೇಟಿ ಮಾಡಿ ಸಂಪರ್ಕಿಸಿ, ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ದೇಣಿಗೆಯನ್ನು ನೀಡುವ ಮೂಲಕ ದೇವರ ಅನುಗ್ರಹಕ್ಕೆ ಪಾತ್ರರಾಗಲು ವಿನಂತಿಸಲಾಯಿತು.

ಕಾಸರಗೋಡು ಜಿಲ್ಲೆಯವರು ಹಾಗೂ ಜಿಲ್ಲೆಯ ಮೂಲದವರು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಸಮಸ್ತ ರಾಮರಾಜ ಕ್ಷತ್ರಿಯ ಕೋಟೆಯಾರ್,ರಾಮ ಕ್ಷತ್ರಿಯ ಸಮಾಜದ ಅಭಿವೃದ್ಧಿಗಾಗಿ ದೇವಸ್ಥಾನದ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಮತ್ತು ಮೂಡಪ್ಪ ಸೇವೆಯ ಪುಣ್ಯಕಾರ್ಯಕ್ಕೆ ತಮ್ಮ ದೇಣಿಗೆಯನ್ನು ನೀಡುವ ಮೂಲಕ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಉಡುಪಿಯ ಪೋಲಿಸ್ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಪಿ.ಹಾಗೂ ಶಿವರಾಮ ಕಾಸರಗೋಡು ವಿನಂತಿಸಿಕೊಂಡಿದ್ದಾರೆ.
( ಶ್ರೀ ದೇವರುಗಳ ಪ್ರತಿಷ್ಠೆಯು 30 ಮಾರ್ಚ್ 2025, ಮೂಡಪ್ಪಸೇವೆ ಮತ್ತು ಶ್ರೀ ಸಿದ್ಧಿವಿನಾಯಕ ದೇವರಿಗೆ ಕವಾಟ ಬಂಧನ -5 ಮೇ -2025 ರಾತ್ರಿ ಗಂಟೆ 11.00 ಕ್ಕೆ
ಕವಾಟೋದ್ಘಾಟನೆ -6 ಮೇ- 2025 ಬೆಳಿಗ್ಗೆ ಗಂಟೆ 6.20 ಕ್ಕೆ )