ಪುತ್ತೂರು: ಯುವಕನೊಬ್ಬನ ಅನುಮಾನಾಸ್ಪದ ಸಾವು ಸಂಭವಿಸಿದ್ದು, ಈ ಬಗ್ಗೆ ಹಲವರ ವಿರುದ್ಧ ಶಂಕೆ ವ್ಯಕ್ತವಾಗಿದೆ. ಬೆಟ್ಟಂಪಾಡಿ ಗ್ರಾಮದ ಬರೆ ಎಂಬಲ್ಲಿ ಯುವಕನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬೆಟ್ಟಂಪಾಡಿ ಬರೆ ನಿವಾಸಿ ದಿ. ಕೊರಗಪ್ಪ ಶೆಟ್ಟಿಯವರ ಪುತ್ರ, 33 ವರ್ಷದ ಚೇತನ್ ಮೃತಪಟ್ಟವರು. ಮದ್ಯ ವ್ಯಸನಿಯಾಗಿದ್ದ ಚೇತನ್ ಗುರುವಾರ ರಾತ್ರಿ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದನೆನ್ನಲಾಗಿದೆ. ನಂತರ ನೆರೆ ಮನೆಗೆ ಹೋಗಿ ಅಲ್ಲೂ ಗಲಾಟೆ ಮಾಡಿದ್ದ. ಅಲ್ಲಿಂದ ಚೇತನ್ ನನ್ನು ಆತನ ತಾಯಿ, ಬಾವ ಹಾಗೂ ನೆರೆ ಮನೆಯ ವ್ಯಕ್ತಿ ನಾಯಿ ಕಟ್ಟುವ ಸಂಕೋಲೆಯಿಂದ ಕಟ್ಟಿ ಎಳೆದುಕೊಂಡು ಬಂದಿದ್ದರು ಎನ್ನಲಾಗಿದೆ. ಈ ವೇಳೆ ಕುತ್ತಿಗೆ ಬಿಗಿದು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂಬ ವದಂತಿ ಹಬ್ಬಿದೆ.
ಮೃತ ಯುವಕನ ದೇಹದಲ್ಲಿ ಗಾಯಗಳು ಕಂಡುಬಂದಿರುವುದರಿಂದ ಶವವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕೊಂಡೊಯ್ಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ. ಘಟನಾ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದ್ದಾರೆ.