ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಮೇರಿಹಿಲ್ ಮಂಗಳೂರು ಇಲ್ಲಿ ದಿನಾಂಕ: 02-01-2025ನೇ ಗುರುವಾರದಂದು ಮಂಗಳೂರು ಘಟಕದ ವಾರದ ಕವಾಯತಿಗೆ ದ. ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಭೇಟಿ ನೀಡಿದರು. ಕಳೆದ 10 ವರ್ಷಗಳಿಂದ ಸಮಾದೇಷ್ಟರಾಗಿ ಸೇವೆಯನ್ನು ಸಲ್ಲಿಸಿ ದಿನಾಂಕ: 05-01-2025 ರಂದು ಅಧಿಕಾರವಧಿ ಮುಕ್ತಾಯಗೊಳ್ಳುವುದರಿಂದ ಮಂಗಳೂರು ಘಟಕದ ಗೃಹರಕ್ಷಕರಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಡಾ|| ಮುರಲೀ ಮೋಹನ ಚೂಂತಾರು ಅವರು ನನ್ನ ಅಧಿಕಾರವಧಿಯಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಗೃಹರಕ್ಷಕರಿಗೆ ಅಭಿನಂದಿಸಿದರು. ಇನ್ನು ಮುಂದೆಯೂ ನಿಮ್ಮ ಸಹಕಾರವನ್ನು ಈ ಇಲಾಖೆಗೆ ನೀಡುವಂತೆ ಆಶಿಸುತ್ತೇನೆ. ನನ್ನ ಅಧಿಕಾರವಧಿಯಲ್ಲಿ ನಾನು ಶಕ್ತಿಮೀರಿ ನಿಷ್ಕಾಮ ಸೇವೆಯನ್ನು ಸಲ್ಲಿಸಿರುತ್ತೇನೆ, ಗೃಹರಕ್ಷಕರ ಕುಂದು ಕೊರತೆಗಳಿಗೆ ಸ್ಪಂದಿಸಿರುತ್ತೇನೆ. ನಮ್ಮ ಅಧಿಕಾರ ಮತ್ತು ಸಂಪತ್ತು ಯಾವುದೂ ಶಾಶ್ವತವಲ್ಲ, ನಮ್ಮ ಒಳ್ಳೆಯ ಕೆಲಸ ಮತ್ತು ಹೆಸರು ಮಾತ್ರ ನಾವು ಬಿಟ್ಟು ಹೋಗುತ್ತೇವೆ. ಆದ್ದರಿಂದ ಯಾರಲ್ಲೂ ನನಗೆ ದ್ವೇಷವಿಲ್ಲ, ಬೇಧಭಾವವಿಲ್ಲ, ಎಲ್ಲರೂ ಸಮಾನರು ಹಾಗೂ ಗೃಹರಕ್ಷಕ ದಳದಲ್ಲಿ ಕೆಲಸ ಮತ್ತು ನಿಷ್ಕಾಮ ಸೇವೆಯಿಂದ ಮಾನಸಿಕ ನೆಮ್ಮದಿ ಸಿಕ್ಕಿದೆ. ನಾನು ಖುಷಿಯಿಂದ ನಿರ್ಗಮಿಸುತ್ತಿದ್ದೇನೆ ಎಂದು ನುಡಿದರು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಘಟಕಾಧಿಕಾರಿ ಸೀನಿಯರ್ ಪ್ಲಟೂನ್ ಕಮಾಂಡರ್ ಶ್ರೀ ಮಾರ್ಕ್‍ಶೇರಾ, ಮಂಗಳೂರು ಘಟಕದ ಸಾರ್ಜಂಟ್ ಶ್ರೀ ಸುನಿಲ್ ಕುಮಾರ್ ಹಾಗೂ ಮಂಗಳೂರು ಘಟಕದ 100 ಗೃಹರಕ್ಷಕ/ಗೃಹರಕ್ಷಕಿಯರು ಉಪಸ್ಥಿತರಿದ್ದರು.
ಡಾ|| ಚೂಂತಾರು ರವರಿಗೆ ಗೃಹರಕ್ಷಕ ದಳದ ಮಂಗಳೂರು ಘಟಕದಿಂದ ಸನ್ಮಾನ
RELATED ARTICLES