ಡಾ. ಶಾಮನೂರು ಶಿವಶಂಕರಪ್ಪ ವ್ಯಕ್ತಿಯಲ್ಲ ಒಂದು ಶಕ್ತಿ – ಹೆಚ್. ವಿ. ಮಂಜುನಾಥ ಸ್ವಾಮಿ,ದಾವಣಗೆರೆ

0
24

Great personalities are not born, they are made” ಎಂಬ ಮಾತಿಗೆ ಜೀವಂತ ಸಾಕ್ಷಿಯಂತಿದ್ದವರು ಡಾ. ಶಾಮನೂರು ಶಿವಶಂಕರಪ್ಪ. ಶ್ರೇಷ್ಠ ವ್ಯಕ್ತಿತ್ವವು ಜನ್ಮದಿಂದ ಅಲ್ಲ, ನಿಸ್ವಾರ್ಥ ಸಮಾಜಸೇವೆ, ಅಚಲ ಶ್ರಮ ಮತ್ತು ಅಪೂರ್ವ ಸಾಧನೆಯಿಂದ ರೂಪುಗೊಳ್ಳುತ್ತದೆ ಎಂಬುದನ್ನು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ ಮಹಾನ್ ಚೇತನ ಅವರು.

ದಾವಣಗೆರೆ ನಗರವನ್ನು ಜಗತ್ತಿನ ಭೂಪಟದಲ್ಲಿ ವಿಶಿಷ್ಟವಾಗಿ ಗುರುತಿಸುವಂತೆ ಹಿರಿಯ ಸಮಾಜಸೇವಕ, ಶಿಕ್ಷಣದಾತ, ರಾಜಕೀಯ ಮುತ್ಸದ್ದಿ ಹಾಗೂ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನದ ಸುದ್ದಿ ದಾವಣಗೆರೆ ಜನತೆಗೆ ಬರಸಿಡಿಲು ಬಡಿದಂತಾಗಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಅಗಲಿಕೆ ಅಲ್ಲ; ಒಂದು ಯುಗಪುರುಷನ ಅಂತ್ಯದ ನೋವನ್ನು ದಾವಣಗೆರೆ ಜನತೆ ಅನುಭವಿಸುತ್ತಿದೆ.

ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅಸಾಮಾನ್ಯ ಸಾಧನೆ ಮಾಡಿದ ಅವರು, ಕಿರಿಯ ವಯಸ್ಸಿನಿಂದಲೇ ಸಾರ್ವಜನಿಕ ಜೀವನದಲ್ಲಿ ತೊಡಗಿ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಗುರುತನ್ನು ಮೂಡಿಸಿಕೊಂಡರು. ನಗರಪಾಲಿಕೆ ಸದಸ್ಯನಾಗಿ ಸಾರ್ವಜನಿಕ ಸೇವೆ ಆರಂಭಿಸಿದ ಅವರು, ಜನಪರ ಕಾರ್ಯಗಳ ಮೂಲಕ ಜನಮನ ಗೆದ್ದು ಪ್ರಭಾವಿ ನಾಯಕನಾಗಿ ಬೆಳೆದರು. ಜೀವನದಲ್ಲಿ ಅನೇಕ ಏಳು–ಬೀಳುಗಳನ್ನು ಎದುರಿಸಿದರೂ, ಧೈರ್ಯ, ತಾಳ್ಮೆ ಮತ್ತು ದೃಢಸಂಕಲ್ಪದಿಂದ ಅವೆಲ್ಲವನ್ನೂ ದಾಟಿ ಯಶಸ್ಸಿನ ಶಿಖರವನ್ನು ತಲುಪಿದರು.

ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಬಳಿಕ ಹಿಂತಿರುಗಿ ನೋಡದ ಅವರು, 2004, 2008, 2013, 2018 ಹಾಗೂ 2023ರಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಿರಂತರವಾಗಿ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ಮತ್ತು ಅನುಭವಿ ಶಾಸಕರಾಗಿ ಗುರುತಿಸಿಕೊಂಡರು. ಕರ್ನಾಟಕ ರಾಜ್ಯದ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಖಜಾಂಚಿಯಾಗಿ ಪಕ್ಷದ ಸಂಘಟನೆಯನ್ನು ಬಲಪಡಿಸಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಯೂ ಅವರದ್ದಾಗಿದೆ.

ವಿಚಿತ್ರವಾದರೂ ಸತ್ಯವೇನೆಂದರೆ, ಕೇವಲ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದರೂ ತಮ್ಮ ದೂರದೃಷ್ಟಿ ಮತ್ತು ಕಾರ್ಯಚಾತುರ್ಯದಿಂದ ದಕ್ಷಿಣ ಭಾರತವೇ ತಿರುಗಿ ನೋಡುವಂತಹ ಶಿಕ್ಷಣ ಮತ್ತು ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದ ಅಪರೂಪದ ವ್ಯಕ್ತಿತ್ವ ಅವರದು. 95ನೇ ವಯಸ್ಸಿನಲ್ಲೂ ವಯಸ್ಸು ಕೇವಲ ಒಂದು ಸಂಖ್ಯೆ ಎಂಬುದನ್ನು ತಮ್ಮ ಶಕ್ತಿ, ಚಟುವಟಿಕೆ ಮತ್ತು ಸೇವಾ ಮನೋಭಾವದಿಂದ ಸಾಬೀತುಪಡಿಸಿದರು.

ವಿದ್ಯೆಯ ಮಹತ್ವವನ್ನು ಅರಿತ ಡಾ. ಶಾಮನೂರು ಶಿವಶಂಕರಪ್ಪ ಅವರು ಬಾಪೂಜಿ ವಿದ್ಯಾಸಂಸ್ಥೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಿ ಜ್ಞಾನ ದಾಸೋಹ ಮಾಡಿದರು. ಈ ಸಂಸ್ಥೆಯಿಂದ ಹೊರಬಂದ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವೈದ್ಯರು, ಇಂಜಿನಿಯರ್‌ಗಳು, ವಿಜ್ಞಾನಿಗಳು, ತಂತ್ರಜ್ಞರು ಹಾಗೂ ವೃತ್ತಿಪರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಾವಣಗೆರೆಯನ್ನು ವಿದ್ಯಾನಗರಿಯಾಗಿ ರೂಪಿಸಿ, ಉದ್ಯೋಗ ಸೃಷ್ಟಿಸಿ ಸಾವಿರಾರು ಕುಟುಂಬಗಳ ಬದುಕಿಗೆ ದಾರಿದೀಪವಾದವರು ಅವರು.

ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಕಲೆ, ಕೈಗಾರಿಕ, ರಾಜಕೀಯ ಮತ್ತು ವ್ಯಾವಹಾರಿಕ ಸೇರಿದಂತೆ ಹತ್ತಾರು ಕ್ಷೇತ್ರಗಳಲ್ಲಿ ಅವರ ಸೇವೆ ಮತ್ತು ಸಾಧನೆಗಳು ಶಾಶ್ವತ ನಿದರ್ಶನಗಳಾಗಿವೆ. ಕೊಡುಗೈ ದಾನಿ, ದಾನ ಚಿಂತಾಮಣಿ, ಅಜಾತಶತ್ರು, ದೂರದೃಷ್ಟಿಯ ನಿಪುಣ, ಸಾಟಿಯಿಲ್ಲದ ಸರದಾರ, ಜಾತ್ಯಾತೀತ ರಾಜಕಾರಣಿ, ರಾಜಕೀಯ ಭೀಷ್ಮ, ಲಕ್ಷ್ಮೀಪುತ್ರ, ಕಲಿಯುಗದ ಕರ್ಣ ಎಂದು ಜನರು ಅವರನ್ನು ಗೌರವದಿಂದ ಸ್ಮರಿಸುತ್ತಾರೆ.

ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಾಲೇಜುಗಳು, ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು ಹಾಗೂ ಸಾಮಾಜಿಕ ಸಂಸ್ಥೆಗಳು ಅವರ ಸೇವೆಯ ಜೀವಂತ ಸಾಕ್ಷಿಗಳಾಗಿ ನಿಂತು ನಗರವನ್ನು ಇನ್ನಷ್ಟು ಸುಂದರಗೊಳಿಸಿವೆ. “ದಣಿವರಿಯದ ದಣಿ” ಎಂದೇ ಹೆಸರಾದ ಎಸ್.ಎಸ್.ಎಂ. ಅವರನ್ನು ಅನೇಕರು ಪ್ರೀತಿಯಿಂದ “ಅಪ್ಪಾಜಿ” ಎಂದು ಕರೆಯುತ್ತಿದ್ದರು.

ಸಮಾಜಸೇವೆಯಲ್ಲಿ ಅಪಾರ ಕೊಡುಗೆ ನೀಡಿದ ಡಾ. ಶಾಮನೂರು ಶಿವಶಂಕರಪ್ಪ ಅವರ ನಿಧನವು ದಾವಣಗೆರೆಗೆ ಮಾತ್ರವಲ್ಲ, ಸಂಪೂರ್ಣ ಕರ್ನಾಟಕ ರಾಜ್ಯಕ್ಕೂ ತುಂಬಲಾರದ ನಷ್ಟವಾಗಿದೆ. ದಾವಣಗೆರೆಯ ಆಲದ ಮರ ಉರುಳಿದಂತಾದರೂ, ಅದರ ನೆರಳು, ಮೌಲ್ಯಗಳು ಮತ್ತು ಸೇವೆಯ ಬೆಳಕು ಮುಂದಿನ ಪೀಳಿಗೆಯಿಗೂ ದಾರಿ ತೋರಿಸುತ್ತಲೇ ಇರುತ್ತವೆ.

ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ.

ಹೆಚ್. ವಿ. ಮಂಜುನಾಥ ಸ್ವಾಮಿ,ದಾವಣಗೆರೆ.

.

LEAVE A REPLY

Please enter your comment!
Please enter your name here