Saturday, April 19, 2025
Homeಬೆಂಗಳೂರುಬೆಂಗಳೂರಿನಲ್ಲಿ 17 ಲಕ್ಷ ಮೌಲ್ಯದ ಡ್ರಗ್ಸ್​ ವಶ: ಇಬ್ಬರು ವಿದೇಶಿಗರ ಬಂಧನ

ಬೆಂಗಳೂರಿನಲ್ಲಿ 17 ಲಕ್ಷ ಮೌಲ್ಯದ ಡ್ರಗ್ಸ್​ ವಶ: ಇಬ್ಬರು ವಿದೇಶಿಗರ ಬಂಧನ

ಬೆಂಗಳೂರು:  ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಅಧಿಕಾರಿಗಳು ಬೆಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ. ನೈಜೀರಿಯಾದ ಎಸ್ಸೋ ಜರ್ಮನ್ ಮತ್ತು ಜಾನ್ ಚುಕುವಾ ಬಂಧಿತರು. ಆರೋಪಿಗಳಿಂದ 17 ಲಕ್ಷ ಮೌಲ್ಯದ 108 ಗ್ರಾಂ ಎಂಡಿಎಂಎ, ಎರಡು ಮೊಬೈಲ್​ಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ಆರೋಪಿಗಳು ಮುಂಬೈನಿಂದ ಮಾದಕ ದ್ರವ್ಯ ತಂದು ಪರಿಚಯಸ್ಥರು, ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬಂದು ನೆಲೆಸಿದ್ದಾರೆ. ಈ ಹಿಂದೆಯೂ ಕೂಡ ಡ್ರಗ್ ಮಾರಾಟ ಆರೋಪದಲ್ಲಿ ಆರೋಪಿಗಳು ಬಂಧನವಾಗಿದ್ದರು. ಜೈಲಿಂದ ಬಿಡುಗಡೆಯಾದ ಬಳಿಕ ಮತ್ತೆ ಕೆ.ಆರ್.ಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಿಸಿಬಿ ಪೊಲೀಸರು ಇಬ್ಬರು ವಿದೇಶಿ ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಿದ್ದರು. ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್​ ಡ್ರಗ್ಸ್ ಜಪ್ತಿ ಮಾಡಿದ್ದರು. ಹೊಸ ವರ್ಷಾಚರಣೆಗೆಂದು ಆರೋಪಿಗಳು ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದರು.

ಈ ವಿಚಾರ ತಿಳಿದ ಸಿಸಿಬಿ ಅಧಿಕಾರಿಗಳು ಡ್ರಗ್ಸ್​ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ, 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಪತ್ತೆಯಾಗಿದ್ದವು. ಕೂಡಲೆ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ಮಾದಕ ವಸ್ತು ಜಪ್ತಿ ಮಾಡಿದ್ದರು.

ಆರೋಪಿಗಳು ಹೊಸ ವರ್ಷಾಚರಣೆ ದಿನದಂದು ಬೆಂಗಳೂರಿನಲ್ಲಿ ಮಾರಲು ಸಜ್ಜಾಗಿದ್ದರು. ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್​ ತರಿಸುತ್ತಿದ್ದರು. ಈ ವಿದೇಶಿ ಡ್ರಗ್​ ಪೆಡ್ಲರ್​ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿತ್ತು.

RELATED ARTICLES
- Advertisment -
Google search engine

Most Popular