ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ನಡೆದ ಯುವ ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ದೇಶದಾದ್ಯಂತ ಬಿರುಗಾಳಿಯನ್ನು ಎಬ್ಬಿಸಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಅತಿ ಶೀಘ್ರದಲ್ಲಿಯೇ ವಿಚಾರಣೆ ನಡೆದು ಅವರುಗಳನ್ನು ಗಲ್ಲಿಗೇರಿಸಬೇಕೆಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದರ ಮಧ್ಯೆ ಮಹಾರಾಷ್ಟ್ರದಲ್ಲಿ ನಡೆದಿರುವ ಮತ್ತೊಂದು ಘಟನೆ ಎಲ್ಲರ ಗಮನ ಸೆಳೆದಿದೆ.
ಆರೋಪಿಯೊಬ್ಬ ಕುಡಿದ ಮತ್ತಿನಲ್ಲಿ ಪರಿಚಿತ ಯುವತಿ ಬಳಿ ಲೈಂಗಿಕ ಕ್ರಿಯೆ ನಡೆಸುವ ಬೇಡಿಕೆ ಇಟ್ಟಿದ್ದು, ರೊಚ್ಚಿಗೆದ್ದ ಯುವತಿ ತಕ್ಕ ಶಾಸ್ತಿ ಮಾಡಿದ್ದಾಳೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿಯಲ್ಲಿ ಆಗಸ್ಟ್ 16ರ ಶುಕ್ರವಾರ ಸಂಜೆ 4:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿ ತನ್ನ ಬಳಿ ಸೆಕ್ಸ್ ಗೆ ಬೇಡಿಕೆ ಇಡುತ್ತಿದ್ದಂತೆ ತೀವ್ರ ಆಕ್ರೋಶಗೊಂಡ ಯುವತಿ, ಅಡುಗೆ ಮನೆಯಲ್ಲಿದ್ದ ಚಿಮುಟ ತಂದು ಆತನ ಖಾಸಗಿ ಅಂಗಕ್ಕೆ ಚುಚ್ಚಿದ್ದಾಳೆ. ಇದರ ಪರಿಣಾಮ ಈಗ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆಗಸ್ಟ್ 16ರಂದು 30 ವರ್ಷದ ಅನಿಲ್ ಸತ್ಯನಾರಾಯಣ ರಚ್ಚ ಎಂಬಾತ ಸಂಪೂರ್ಣ ಪಾನಮತ್ತನಾಗಿ ತನಗೆ ಪರಿಚಯವಿದ್ದ 26 ವರ್ಷದ ಯುವತಿ ಮನೆಗೆ ತೆರಳಿ ಲೈಂಗಿಕ ಕ್ರಿಯೆ ನಡೆಸುವ ಬೇಡಿಕೆ ಇಟ್ಟಿದ್ದಾನೆ. ಅಲ್ಲದೆ ಕೈಹಿಡಿದು ಎಳೆದಾಡಿದ್ದು, ಯುವತಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಬಳಿಕ ಆತನಿಂದ ಬಿಡಿಸಿಕೊಂಡು ಸೀದಾ ಅಡುಗೆ ಮನೆಗೆ ಹೋಗಿ ಚಿಮುಟ ತಂದು ಅದರಿಂದ ಆತನ ಖಾಸಗಿ ಅಂಗಕ್ಕೆ ಚುಚ್ಚಿದ್ದಾಳೆ. ಇದರಿಂದ ತೀವ್ರವಾಗಿ ಗಾಯಗೊಂಡ ಅನಿಲ್ ಸತ್ಯನಾರಾಯಣ ರಚ್ಚ ಸಮೀಪದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ. ಯುವತಿ ಪೊಲೀಸರಿಗೆ ದೂರು ನೀಡಿದ್ದು ಭಾರತೀಯ ದಂಡ ಸಂಹಿತೆ ಕಾನೂನಿನಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲು ಆಸ್ಪತ್ರೆಯಿಂದ ಬಿಡುಗಡೆಯಾಗುವುದನ್ನು ಪೊಲೀಸರು ಕಾಯುತ್ತಿದ್ದಾರೆ