ನವದೆಹಲಿ: ಕಾಸರಗೋಡಿನಲ್ಲಿ ನಡೆದ ಅಣಕು ಮತದಾನದ ವೇಳೆ ಇವಿಎಂನಲ್ಲಿ ಬಿಜೆಪಿಗೆ ಹೆಚ್ಚು ಮತ ಬಿದ್ದಿದೆ ಎನ್ನಲಾದ ಕುರಿತ ಲೋಪದೋಷಗಳನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅಣಕು ಮತದಾನದ ವೇಳೆ ಬಿಜೆಪಿಗೆ ಹೆಚ್ಚು ಮತ ಲಭಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಚುನಾವಣಾ ಆಯೋಗಕ್ಕೆ ಈ ನಿರ್ದೇಶನ ನೀಡಿದೆ. ಇವಿಎಂ-ವಿವಿಪ್ಯಾಟ್ ಪ್ರಕರಣ ಕುರಿತ ವಿಚಾರಣೆಯ ಸಂದರ್ಭ ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಹಾಗೂ ದೀಪಾಂಕರ್ ದತ್ತಾ ನ್ಯಾಯಪೀಠ ಈ ಕುರಿತು ಮೌಖಿಕ ಸೂಚನೆ ನೀಡಿತು. ಇವಿಎಂ ಕುರಿತ ಪ್ರಕರಣದಲ್ಲಿ ಹೋರಾಡುತ್ತಿರುವ ಎಡಿಆರ್ ಪರವಾಗಿ ಹಾಜರಾಗಿದ್ದ ನ್ಯಾಯಾವಾದಿ ಪ್ರಶಾಂತ್ ಭೂಷಣ್ ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ಬಿಜೆಪಿಗೆ ಒಂದು ಹೆಚ್ಚು ಮತ ಬಿದ್ದಿರುವ ಸುದ್ದಿಯನ್ನು ಮಾಧ್ಯಮವೊಂದು ಪ್ರಕಟಿಸಿರುವುದನ್ನು ಕೋರ್ಟಿನ ಗಮನಕ್ಕೆ ತಂದರು. ಇದನ್ನು ಗಮನಿಸಿದ ನ್ಯಾಯಪೀಠ ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಅಧಿಕಾರಿ ಮಣಿಂದರ್ ಸಿಂಗ್ ಗೆ ಈ ಬಗ್ಗೆ ನಿರ್ದೇಶಿಸಿದರು. ಬಿಜೆಪಿಗೆ ಹೆಚ್ಚುವರಿ ಮತ ದಾಖಲಾದ ಬಗ್ಗೆ ಕೇರಳದ ಆಡಳಿತ ಪಕ್ಷ ಎಲ್ ಡಿಎಫ್ ಹಾಗೂ ವಿಪಕ್ಷ ಯುಡಿಎಫ್ 4 ಇವಿಎಂಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಇವಿಎಂನಲ್ಲಿ ದಾಖಲಾದ ಎಲ್ಲಾ ಮತಗಳನ್ನು ವಿವಿಪ್ಯಾಟ್ ಜೊತೆ ತಾಳೆ ಹಾಕಿ ನೋಡಬೇಕು ಹಾಗೂ ವಿವಿಪ್ಯಾಟ್ ಸ್ಲಿಪ್ ಗಳನ್ನು ಬ್ಯಾಲೆಟ್ ಬಾಕ್ಸ್ ನಲ್ಲಿ ಠೇವಣಿ ಇಡಲು ಆದೇಶಿಸಬೇಕು ಎಂದು ಕೋರಿದ ಅರ್ಜಿಯೊಂದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸುತ್ತಿದೆ. ಈ ನಡುವೆ ಮೊದಲ ಹಂತದ ಚುನಾವಣೆಗೆ ಒಂದು ದಿನವಿರುವಾಗ ಈ ಮಹತ್ವದ ಆದೇಶ ಹೊರಬಿದ್ದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.