ಮೃತಪಟ್ಟ ತಂದೆಯ ಅಂತ್ಯಕ್ರಿಯೆ ವೇಳೆ ಸಹೋದರರಿಬ್ಬರ ನಡುವೆ ಮನಸ್ತಾಪ ಎದುರಾಗಿದ್ದು, ಈ ವೇಳೆ ಮೃತದೇಹ ಎರಡು ಭಾಗ ಮಾಡುವಂತೆ ಪಟ್ಟು ಹಿಡಿದ ಘಟನೆಯೊಂದು ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದಲ್ಲಿರುವ ಲಿಧೋರಾತಾಲ್ ಗ್ರಾಮದಲ್ಲಿ ಭಾನುವಾರ ಗಲಾಟೆಯಾಗಿದೆ ಎಂದು ತಿಳಿದುಬಂದಿದೆ.
ತನ್ನ ಕಿರಿಯ ಮಗ ದೇಶರಾಜ್ ಜೊತೆ ವಾಸಿಸುತ್ತಿದ್ದ ಧ್ಯಾನಿ ಸಿಂಗ್ ಘೋಷ್ (84) ಎಂಬುವವರು, ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದರು. ಗ್ರಾಮದ ಹೊರಗೆ ವಾಸಿಸುತ್ತಿದ್ದ ಅವರ ಹಿರಿಯ ಮಗ ಕಿಶನ್ ಸಾವಿನ ಬಗ್ಗೆ ಮಾಹಿತಿ ತಿಳಿದ ಕೂಡಲೇ ಗ್ರಾಮಕ್ಕೆ ಬಂದಿದ್ದಾನೆ.
ಈ ವೇಳೆ ಹಿರಿಯ ಮಗನಾಗಿದ್ದು ತಂದೆಯ ಅಂತ್ಯಕ್ರಿಯೆಯನ್ನು ನಾನೇ ಮಾಡುತ್ತೇನೆ ಎಂದು ಕಿಶನ್ ಹೇಳಿದ್ದಾನೆ. ಈ ವೇಳೆ ದೇಶರಾಜ್, ನಾನೇ ಅಂತ್ಯಕ್ರಿಯೆ ನಡೆಸಬೇಕೆಂಬುದು ತಂದೆಯ ಕೊನೆಯ ಆಸೆಯಾಗಿತ್ತು ಎಂದು ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಮದ್ಯಪಾನ ಮಾಡಿದ್ದ ಕಿಶನ್ ಮೃತದೇಹವನ್ನು ಭಾಗ ಮಾಡಿ, ಇಬ್ಬರಿಗೂ ನೀಡುವಂತೆ ಆಗ್ರಹಿಸಿದ್ದಾನೆ. ಈ ವೇಳೆ ಆಘಾತಗೊಂಡಿರುವ ಗ್ರಾಮಸ್ಥರೂ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನ ಸಮಾಧಾನಪಡಿಸಿದ್ದಾನೆ. ಬಳಿಕ ಕಿಶನ್ ಸ್ಥಳ ತೊರೆದಿದ್ದು, ಕಿರಿಯ ಮಗ ದೇಶರಾಜ್ ಅಂತ್ಯಕ್ರಿಯೆ ನೆರವೇರಿಸಿದ್ದಾನೆ.