ಹಾವೇರಿ: ಇಂದು ಬೆಳಗ್ಗೆ ಹಾವೇರಿ ಸೇರಿದಂತೆ ರಾಜ್ಯದ ಹಲವೆಡೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು, ಭ್ರಷ್ಟರಿಗೆ ಬಿಸಿ ಮುಟ್ಟಿಸಿದ್ದಾರೆ. ಇದರ ನಡುವೆ ಹಾವೇರಿಯ ಅಧಿಕಾರಿಯೊಬ್ಬರ ನಿವಾಸದಲ್ಲಿ ಭಾರಿ ಹೈಡ್ರಾಮ ನಡೆದಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇ ಕಾಶೀನಾಥ ಭಜಂತ್ರಿ ಮನೆಯಲ್ಲಿ ಹೈಡ್ರಾಮ ನಡೆದಿದೆ. ಕಾಶೀನಾಥ್ ಅವರು ಬರೋಬ್ಬರಿ 9 ಲಕ್ಷ ರೂಪಾಯಿ ಹಣವನ್ನು ಗಂಟು ಕಟ್ಟಿ, ಮನೆಯ ಕಿಟಕಿ ಮೂಲಕ ಹೊರಗೆ ಬೀಸಾಡಿದ್ದಾರೆ. ಅಲ್ಲದೆ, 2 ಲಕ್ಷ ರೂ. ನಗದನ್ನು ಬೆಡ್ ನಲ್ಲಿ ಸುತ್ತಿ ಇಟ್ಟಿರುವುದು ಕಂಡುಬಂದಿದೆ.
ಹಾವೇರಿಯ ಬಸವೇಶ್ವರ ನಗರದ 1ನೇ ಕ್ರಾಸ್ನಲ್ಲಿರುವ ಕಾಶೀನಾಥ್ ಭಜಂತ್ರಿ ನಿವಾಸದಲ್ಲಿ ಈ ಘಟನೆ ನಡೆದಿದೆ. ಕಾಶೀನಾಥ ಭಜಂತ್ರಿಯ ಹಿರೇಕೆರೂರ ಉಪ ವಿಭಾಗದ ಕಚೇರಿ, ಹಾವೇರಿನಗರದ ಏಳು ಮನೆಗಳು, ಮುಂಡಗೋಡದ ಫಾಮ್೯ ಹೌಸ್ ಮೇಲೆ ದಾಳಿ ನಡೆಸಿರುವ ಲೋಕಾ ತಂಡ ಭಾರಿ ಪ್ರಮಾಣದ ಆಸ್ತಿ ಪತ್ರಗಳು, ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಿದೆ.