Tuesday, January 14, 2025
Homeದೆಹಲಿಆಂಧ್ರ ಪ್ರದೇಶ, ನೇಪಾಳ, ಕ್ಯೂಬಾ ಸೇರಿದಂತೆ ಜಗತ್ತಿನ ಹಲವೆಡೆ ಭೂಕಂಪನ; ವನವಾಟುನಲ್ಲಿ 12 ಮಂದಿ ಸಾವು

ಆಂಧ್ರ ಪ್ರದೇಶ, ನೇಪಾಳ, ಕ್ಯೂಬಾ ಸೇರಿದಂತೆ ಜಗತ್ತಿನ ಹಲವೆಡೆ ಭೂಕಂಪನ; ವನವಾಟುನಲ್ಲಿ 12 ಮಂದಿ ಸಾವು

ನವದೆಹಲಿ: ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿರುವ ದ್ವೀಪರಾಷ್ಟ್ರ ವನವಾಟುವಿನಲ್ಲಿ ಭಾರಿ ಕಂಪನ ದಾಖಲಾಗಿವೆ.
ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿಗೆ ಕಂಪನದ ಅನುಭವವಾಗಿದೆ. ಜಿಲ್ಲೆಯ ಮುಂಡ್ಲಮೂರಿನಲ್ಲಿ ಇಂದು ಕೂಡ ಭೂಕಂಪನದ ಅನುಭವವಾಗಿದ್ದು, ಕಳೆದ ಮೂರು ದಿನಗಳಿಂದ ಮುಂಡ್ಲಮೂರಿನಲ್ಲಿ ಸತತ ಭೂಕಂಪನ ಉಂಟಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇಂದು ಮತ್ತೊಮ್ಮೆ ಕಂಪನದ ಅನುಭವವಾಗಿದೆ. ಇದರಿಂದ ಜನರು ಮನೆ ಬಿಟ್ಟು ಓಡಿ ಬಂದಿದ್ದಾರೆ. ಮೂರು ದಿನಗಳಿಂದ ಭೂಮಿ ಕಂಪಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ. ಆ ಪ್ರದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ಅವರಿಗೆ ಅರ್ಥವಾಗುತ್ತಿಲ್ಲ ಮತ್ತು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ನೇಪಾಳದಲ್ಲಿ ಇಂದು ಮುಂಜಾನೆ 3.59ರ ಸಮಯದಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ನೇಪಾಳದ ಬಜುರಾ ಜಿಲ್ಲೆಯ ಜಗನ್ನಾಥ್ ಗ್ರಾಮೀಣ ಪುರಸಭೆಯ ವಾರ್ಡ್ ಸಂಖ್ಯೆ 5ರ ಗೋತ್ರಿಯಲ್ಲಿ ಈ ಕೇಂದ್ರಬಿಂದು ದಾಖಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತೆಯೇ ಮೇಲಿನ ಮತ್ತು ಕೆಳಗಿನ ಗೋತ್ರಿಯಲ್ಲಿ 123 ಮನೆಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಇಲ್ಲಿ ಯಾವುದೇ ಜೀವಹಾನಿಯಾದ ಬಗ್ಗೆ ವರದಿಯಾಗಿಲ್ಲ.
ವನವಾಟು 6.1 ತೀವ್ರತೆಯ ಭೂಕಂಪನ
ನಿನ್ನೆ ಪೆಸಿಫಿಕ್ ದ್ವೀಪಸಮೂಹದ ವನವಾಟು ದೇಶದಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಭಾನುವಾರ ಮುಂಜಾನೆ ವನವಾಟುವಿನ ಮುಖ್ಯ ದ್ವೀಪದಲ್ಲಿ 6.1 ತೀವ್ರತೆಯ ಭೂಕಂಪವು ಕಟ್ಟಡಗಳನ್ನು ನಡುಗಿಸಿತು. ಈ ಘಟನೆಯಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿ ಹಲವು ಕಟ್ಟಡಗಳಿಗೆ ಹಾನಿಯಾಗಿತ್ತು. ಭೂಕಂಪನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಭೂಕಂಪನದ ಕೇಂದ್ರ ಬಿಂದು 40 ಕಿಲೋಮೀಟರ್ ಆಳದಲ್ಲಿ ಸಂಭವಿಸಿದ್ದು, ರಾಜಧಾನಿಯಿಂದ ಪಶ್ಚಿಮಕ್ಕೆ ಸುಮಾರು 30 ಕಿಮೀ ದೂರದಲ್ಲಿತ್ತು ಎನ್ನಲಾಗಿದೆ.
ಕ್ಯೂಬಾದಲ್ಲೂ 5.9 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನದ ಕೇಂದ್ರ ಬಿಂದು ಇಲ್ಲಿನ ಗುಯಿಸಾದಿಂದ 46 ಕಿ.ಮೀ. ದಕ್ಷಿಣಕ್ಕೆ ಸುಮಾರು 25 ಕಿ.ಮೀ. ಆಳದಲ್ಲಿ ದಾಖಲಾಗಿದೆ ಎಂದು ಇಎಂಎಸ್‌ಸಿ ವರದಿ ಮಾಡಿದೆ.

RELATED ARTICLES
- Advertisment -
Google search engine

Most Popular