ಬೆಂಗಳೂರು: ಆನ್ ಲೈನ್ ಗೇಮ್ ಆಡಲು ಮೊಬೈಲ್ ಕೊಡದಿದ್ದಕ್ಕೆ ತನ್ನ ಸ್ವಂತ ತಮ್ಮನನ್ನೇ ಅಣ್ಣ ಹತ್ಯೆಗೈದಿರುವ ಘಟನೆ ನಡೆದಿದೆ. 15 ವರ್ಷದ ತಮ್ಮನನ್ನು 18 ವರ್ಷದ ಅಣ್ಣ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ 15 ವರ್ಷದ ಪ್ರಾಣೇಶ್ ಶವ ಸರ್ಜಾಪುರದ ನೆರಿಗಾ ಗ್ರಾಮದ ಹೊರ ವಲಯದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಬಾಲಕನ ಸಹೋದರ 18 ವರ್ಷದ ಶಿವಕುಮಾರ್ ನನ್ನು ವಿಚಾರಣೆ ನಡೆಸಿದಾಗ ತಾನೇ ತಮ್ಮನನನ್ನು ಹತ್ಯೆಗೈದಿರುವುದಾಗಿ ಒಪ್ಪಿಕೊಂಡಿದ್ದಾನೆ. ಶಿವಕುಮಾರ್ ಆನ್ ಲೈನ್ ಗೇಮ್ ಹುಚ್ಚಿಗೆ ಬಿದ್ದಿದ್ದು, ಆಟವಾಡಲು ಮೊಬೈಲ್ ನೀಡಲಿಲ್ಲವೆಂದು ತಮ್ಮನನ್ನು ಹ್ತಯೆ ಮಾಡಿದ್ದಾನೆ ಎನ್ನಲಾಗಿದೆ.
ಮೂಲತಃ ಆಂದ್ರ ಮೂಲದ ಚನ್ನಮ್ಮ ಮತ್ತು ಬಸವರಾಜ್ ದಂಪತಿ ಕಳೆದ ಮೂರು ತಿಂಗಳ ಹಿಂದೆ ನೆರಿಗಾ ಗ್ರಾಮಕ್ಕೆ ಬಂದು ಗಾರೆ ಕೆಲಸ ಮಾಡಿಕೊಂಡಿದ್ದರು. ಅಜ್ಜಿ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದ ಪ್ರಾಣೇಶ್ ಬೇಸಿಗೆ ರಜೆ ಸಲುವಾಗಿ ನೆರಿಗಾ ಗ್ರಾಮಕ್ಕೆ ಬಂದಿದ್ದ.
ಆರೋಪಿಯು ತಮ್ಮನ ಹತ್ಯೆಗೈದು ಏನೂ ಗೊತ್ತಿಲ್ಲದಂತೆ ಇದ್ದ. ಬಾಲಕ ನಾಪತ್ತೆಯಾಗಿದ್ದಾನೆಂದು ಎಲ್ಲರೂ ಹುಡುಕುತ್ತಿದ್ದಾಗ ತಾನೂ ಹುಡುಕಾಟ ನಡೆಸಿ, ಬಾಲಕನ ಮೃತದೇಹ ಪತ್ತೆಯಾದ ಬಗ್ಗೆ ಮಾಹಿತಿ ನೀಡಿದ್ದ. ತಾನೇ ಮೊದಲು ಮೃತದೇಹ ನೋಡಿದ್ದಾಗಿ ಹೇಳಿದ್ದರಿಂದ ಪೊಲೀಸರು ಆತನನ್ನು ವಿಚಾರಣೆ ನಡೆಸಿದಾಗ ಪ್ರಕರಣದ ನಿಜಾಂಶ ಬೆಳಕಿಗೆ ಬಂದಿದೆ.