Sunday, July 21, 2024
Homeಅಂತಾರಾಷ್ಟ್ರೀಯಇಂಗ್ಲೆಂಡ್‌ ಚುನಾವಣೆ | ಗೆದ್ದು ಬೀಗಿದ ಕೀರ್‌ ಸ್ಟಾರ್ಮರ್‌ ಮುಂದಿನ ಪ್ರಧಾನಿ; ಯಾರು ಈ ಕಾರ್ಮಿಕ...

ಇಂಗ್ಲೆಂಡ್‌ ಚುನಾವಣೆ | ಗೆದ್ದು ಬೀಗಿದ ಕೀರ್‌ ಸ್ಟಾರ್ಮರ್‌ ಮುಂದಿನ ಪ್ರಧಾನಿ; ಯಾರು ಈ ಕಾರ್ಮಿಕ ನಾಯಕ?

ಇನ್ಫೋಸಿಸ್‌ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್‌ ಪಕ್ಷಕ್ಕೆ ಹೀನಾಯ ಸೋಲು
ಲಂಡನ್: ಇಂಗ್ಲೆಂಡ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಮುಂದಿನ ಪ್ರಧಾನಿಯಾಗಿ ಲೇಬರ್‌ ಪಾರ್ಟಿಯ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಕನ್ಸರ್ವೇಟೀವ್ ಪಕ್ಷವನ್ನು ಬಗ್ಗು ಬಡಿದಿರುವ ಲೇಬರ್ ಪಾರ್ಟಿ ಅಧಿಕಾರದ ಗದ್ದುಗೆ ಹಿಡಿದಿದೆ. 14 ವರ್ಷಗಳ ಬಳಿಕ ಲೇಬರ್ ಪಾರ್ಟಿ ಭರ್ಜರಿ ವಿಜಯ ಸಾಧಿಸಿದೆ. ಆ ಮೂಲಕ ಕರ್ನಾಟಕದ ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಅಳಿಯ, ಹಾಲಿ ಪ್ರಧಾನಿ ರಿಷಿ ಸುನಕ್‌ ಪಕ್ಷಕ್ಕೆ ತೀವ್ರ ಹಿನ್ನಡೆಯಾಗಿದೆ.
ಇಂಗ್ಲೆಂಡ್ ಪಾರ್ಲಿಮೆಂಟ್‌ನ ಒಟ್ಟು 650 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಅಧಿಕ್ಕೇರುವ ಪಕ್ಷಕ್ಕೆ 326 ಸ್ಥಾನಗಳ ಅವಶ್ಯಕತೆ ಇತ್ತು. ಇತ್ತೀಚಿನ ಮಾಹಿತಿ ಪ್ರಕಾರ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿ 326 ಸ್ಥಾನಗಳನ್ನ ಗೆದ್ದು ಮುನ್ನುಗ್ಗುತ್ತಿದೆ. ಎಕ್ಸಿಟ್‌ ಪೋಲ್‌ ಪ್ರಕಾರ ಲೇಬರ್ ಪಕ್ಷ 410 ಸೀಟ್‌ಗಳಲ್ಲಿ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
ಇಂಗ್ಲೆಂಡ್‌ನ ಮುಂದಿನ ಪ್ರಧಾನಿ ಕೀರ್ ಸ್ಟಾರ್ಮರ್‌ಗೆ ಸದ್ಯ 61 ವರ್ಷ ವಯಸ್ಸು. ಇಂಗ್ಲೆಂಡ್‌ನ ಹೊರ ವಲಯದ ಸರ್ರೆ ಮೂಲದ ಕೀರ್ ಸ್ಟಾರ್ಮರ್‌ ತಾಯಿ ನರ್ಸ್‌ ಆಗಿದ್ದರು. ಸ್ಟಾರ್ಮರ್ ಅವರು ಇಡೀ ಕುಟುಂಬದಲ್ಲೇ ಮೊದಲ ಪದವಿಧರರು. ಲೀಡ್ಸ್ ವಿವಿಯಲ್ಲಿ ಶಿಕ್ಷಣ ಪಡೆದ ಇವರು ಆಕ್ಸ್‌ಫರ್ಡ್‌ನಲ್ಲಿ ಕಾನೂನು ವ್ಯಾಸಂಗ ಮಾಡಿದ್ದಾರೆ.
ಕೀರ್ ಸ್ಟಾರ್ಮರ್‌ ಅವರು ವೃತ್ತಿಯಲ್ಲಿ ವಕೀಲರು. ಮಾನವ ಹಕ್ಕುಗಳ ಪರ ಬಹಳಷ್ಟು ಹೋರಾಟಗಳನ್ನು ನಡೆಸಿ ಗಮನ ಸೆಳೆದಿರುವ ಸ್ಟಾರ್ಮರ್ ಮಾನವ ಹಕ್ಕು, ಕಾರ್ಮಿಕರ ಪರ ನಡೆಸಿದ ದೀರ್ಘಕಾಲಿನ ಹೋರಾಟಕ್ಕೆ ಇಂಗ್ಲೆಂಡ್‌ನಲ್ಲಿ ಕೊನೆಗೂ ಜಯ ಸಿಕ್ಕಿದೆ.
ಸತತ ಮೂರು ಬಾರಿ ಕನ್ಸರ್ವೇಟೀವ್ ಪಕ್ಷವೇ ಗೆಲುವು ಸಾಧಿಸುತ್ತಾ ಬಂದಿತ್ತು. ಬ್ರಿಟೀಷರ ನಾಡಲ್ಲಿ ಪ್ರಬಲವಾಗಿದ್ದ ಕನ್ಸರ್ವೇಟೀವ್ ಪಕ್ಷವನ್ನು ಸೋಲಿಸುವಲ್ಲಿ ಕೀರ್ ಸ್ಟಾರ್ಮರ್ ಅವರ ಪಾತ್ರ ದೊಡ್ಡದಿದೆ. ಸತತ ಸೋಲಿನ ಸುಳಿಯಲ್ಲಿದ್ದ ಲೇಬರ್ ಪಾರ್ಟಿಯ ಗೆಲುವಿಗೆ ಕೀರ್ ಸ್ಟಾರ್ಮರ್ ನಿರಂತರ ಹೋರಾಟ ನಡೆಸಿ ಗೆದ್ದಿದ್ದಾರೆ.

RELATED ARTICLES
- Advertisment -
Google search engine

Most Popular