ಮುಂಗಾರು ಸಮಯದಲ್ಲಿ ಚಿಕ್ಕಮಗಳೂರಿನ ಸೌಂದರ್ಯ ದುಪಟ್ಟಾಗಿರುತ್ತದೆ. ನೆರೆ ಜಿಲ್ಲೆ ಅಲ್ಲದೇ ರಾಜ್ಯದ ಮೂಲೆ-ಮೂಲೆಯಿಂದ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸುತ್ತಾರೆ. ಪ್ರಾಕೃತಿಕ ಸೌಂದರ್ಯದಿಂದ ಸಮೃದ್ಧಿವಾಗಿರುವ ಕಾಫಿನಾಡಿನ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದು, ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ.
ಸದ್ಯ ಚಿಕ್ಕಮಗಳೂರಿನಲ್ಲಿ ಜೋರು ಮಳೆ,ಗಾಳಿ ಪ್ರಾರಂಭವಾಗಿದೆ. ಈ ಸಮಯದಲ್ಲಿ ಚಾರಣಕ್ಕೆ ಹೋಗುವುದು ಅಪಾಯ. ಆದರೂ ಕೂಡ ಜನರು ಈ ಪ್ರದೇಶದಲ್ಲಿ ಚಾರಣಕ್ಕೆ ತೆರಳುತ್ತಿದ್ದು, ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ಕಮವಾಗಿ ಮೂಡಿಗೆರೆ ವಲಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಚಾರಣ ನಿಷೇಧಿಸಿದೆ.
ರಾಜ್ಯದ ವಿವಿಧ ಚಾರಣ ಪಥಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿ, ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸುವವರೆಗೆ ಎಲ್ಲ ಚಾರಣಪಥಗಳಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಪ್ರವೇಶ ನಿರ್ಬಂಧಿಸಿತ್ತು. ಆದರೂ ಕೂಡ ಹಲವು ಚಾರಣಪಥಗಳಲ್ಲಿ ಅನಿರ್ಬಂಧಿತವಾಗಿ ಪ್ರವಾಸಿಗರು ಓಡಾಡುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಎತ್ತಿನ ಭುಜವು ಸುಮಾರು 25 ಕಿಮೀ ದೂರದಲ್ಲಿದೆ. ಪಶ್ಚಿಮ ಘಟ್ಟಗಳ ಪರ್ವತದ ಶಿಖರವಾಗಿದೆ. ಇದು 4,265 ಅಡಿ ಎತ್ತರವನ್ನು ಹೊಂದಿದೆ