EPFO ಸ್ಟಾಫ್ ಕೋ-ಆಪರೇಟಿವ್ ಸೊಸೈಟಿ ವಂಚನೆ ಪ್ರಕರಣ: ಸಿಇಒ​ಗಿಂತಲೂ ಅಧಿಕ ಆಸ್ತಿ ಗಳಿಸಿರುವ ಅಕೌಂಟೆಂಟ್ ಜಗದೀಶ್

0
40

ಬೆಂಗಳೂರು : ಬೆಂಗಳೂರಿನಲ್ಲಿ ಸಂಚಲನ ಸೃಷ್ಟಿಸಿರುವ ಇಪಿಎಫ್​ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಆಘಾತಕಾರಿ ಮಾಹಿತಿ ತನಿಖೆ ವೇಳೆ ಬಯಲಾಗಿದೆ. ಇಪಿಎಫ್​ಒ ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸಿಇಒ ಗೋಪಿನಾಥ್ ಈ ಕೇಸ್‌ನ ಮಾಸ್ಟರ್‌ಮೈಂಡ್ ಎಂದು ಈ ಹಿಂದೆ ಭಾವಿಸಿದ್ದ ಪೊಲೀಸರು ಅಕೌಂಟೆಂಟ್ ಜಗದೀಶ್‌ನ ಆಸ್ತಿ, ಖಾತೆಗಳು ಹಾಗೂ ವಂಚನೆ ವಿಧಾನ ನೋಡಿ ಆಘಾತಕ್ಕೊಳಗಾಗುವಂತಾಗಿದೆ. ಕೇವಲ 21,000 ರೂ. ಸಂಬಳ ಪಡೆಯುತ್ತಿದ್ದ ಜಗದೀಶ್ ಕೋಟ್ಯಂತರ ಮೌಲ್ಯದ ಮನೆ, ಕಾರು, ಫಾರ್ಮ್‌ಹೌಸ್ ಸೇರಿದಂತೆ ಹಲವು ಆಸ್ತಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಅಕೌಂಟೆಂಟ್ ಜಗದೀಶ್ ಹಾಗೂ ಅವನ ಪತ್ನಿ ಲಕ್ಷ್ಮೀ ಈ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳು ಎಂದು ಗುರುತಿಸಲಾಗಿದ್ದು, ಇಬ್ಬರೂ ಹೂಡಿಕೆದಾರರ ಹಣವನ್ನು ಬೇನಾಮಿ ಖಾತೆಗಳಲ್ಲಿ ಹಾಕಿ ಐಷಾರಾಮಿ ಜೀವನ ನಡೆಸಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಜಗದೀಶ್ ಪತ್ನಿ ಲಕ್ಷ್ಮೀ ಅಕೌಂಟ್‌ಗಳ ಸಂಪೂರ್ಣ ನಿರ್ವಹಣೆ ಮಾಡುತ್ತಿದ್ದಳು ಮತ್ತು ಹೂಡಿಕೆದಾರರ ಹಣ ಬ್ಯಾಂಕ್‌ಗೆ ಹೋಗದೆ ನೇರವಾಗಿ ಇವರ ಖಾತೆಗಳಿಗೆ ಸೇರುತ್ತಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅನುಮಾನಗೊಂಡ ಹೂಡಿಕೆದಾರರು ಪ್ರಶ್ನೆ ಮಾಡುತ್ತಿದ್ದಂತೆಯೇ ಜಗದೀಶ್ ಪರಾರಿಯಾಗಿದ್ದಾನೆ.

LEAVE A REPLY

Please enter your comment!
Please enter your name here