Sunday, July 14, 2024
Homeಬೆಂಗಳೂರುಸುಲಿಗೆ ಪ್ರಕರಣ | ʻಇಡೀ ರಾಜ್ಯವೇ ಖುಷಿ ಪಡುವ ಸುದ್ದಿʼ ಖ್ಯಾತಿಯ ನಿರೂಪಕಿ ದಿವ್ಯ ವಸಂತ...

ಸುಲಿಗೆ ಪ್ರಕರಣ | ʻಇಡೀ ರಾಜ್ಯವೇ ಖುಷಿ ಪಡುವ ಸುದ್ದಿʼ ಖ್ಯಾತಿಯ ನಿರೂಪಕಿ ದಿವ್ಯ ವಸಂತ ಕೇರಳದಲ್ಲಿ ಬಂಧನ

ಬೆಂಗಳೂರು: ಸ್ಪಾ ಮಾಲೀಕರೊಬ್ಬರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದ ಆರೋಪವಿರುವ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಟಿವಿ ವಾಹಿನಿಯೊಂದರ ನಿರೂಪಕಿ ದಿವ್ಯ ವಸಂತ ಕೇರಳದಲ್ಲಿ ಬಂಧಿತಳಾಗಿದ್ದಾಳೆ. ಬೆಂಗಳೂರಿನ ಇಂದಿರಾ ನಗರದಲ್ಲಿರುವ ಸ್ಪಾ ಮಾಲೀಕನೊಬ್ಬನಿಗೆ ಬೆದರಿಕೆ ಹಾಗೂ ಬ್ಲಾಕ್‌ಮೇಲ್‌ ಮಾಡಿ ಅವರಿಂದ 15 ಲಕ್ಷ ರೂ. ಸುಲಿಗೆಗೆ ಯತ್ನಿಸಿದ ಬಗ್ಗೆ ದಿವ್ಯ ವಸಂತ ವಿರುದ್ಧ ಪ್ರಕರಣ ದಾಖಲಾಗಿತ್ತು. ಕೇರಳದಲ್ಲಿ ತಲೆ ಮರೆಸಿಕೊಂಡಿದ್ದ ಆಕೆಯನ್ನು ಜೀವನ್‌ ಭೀಮಾ ನಗರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರಕರಣಕ್ಕೆ ಸಂಬಂಧಿಸಿ ಖಾಸಗಿ ಸುದ್ದಿ ವಾಹಿನಿಯ ಕಾರ್ಯ ನಿರ್ವಾಹಕರಾಗಿದ್ದ ರಾಜಾನುಕುಂಟೆ ವೆಂಕಟೇಶ್‌, ದಿವ್ಯ ಸಹೋದರ ಸಂದೇಶ್‌ರನ್ನು ಬಂಧಿಸಲಾಗಿದೆ.
ವಾಟ್ಸಾಪ್‌ನಲ್ಲಿ ʻಸ್ಪೈ ರಿಸರ್ಚ್‌ ಟೀಂʼ ಎಂಬ ವಾಟ್ಸಾಪ್‌ ಗ್ರೂಪ್‌ ರಚಿಸಿಕೊಂಡಿದ್ದ ಗುಂಪು, ಸಿರಿವಂತರನ್ನು ಗುರಿಯಾಗಿಸಿಕೊಂಡು ಅವರನ್ನು ಬ್ಲಾಕ್‌ಮೇಲ್‌ ಮಾಡಿ ಅವರನ್ನು ಸುಲಿಗೆ ಮಾಡುವುದು ಹೇಗೆನ್ನುವುದರ ಬಗ್ಗೆ ಚರ್ಚಿಸಿತ್ತು. ಇಂದಿರಾನಗರದ ಸ್ಪಾವೊಂದಕ್ಕೆ ವೆಂಕಟೇಶ್‌ ಹಾಗೂ ದಿವ್ಯಾ ತಂಡ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಈ ಸ್ಪಾಗೆ ಗ್ರಾಹಕನಂತೆ ದಿವ್ಯ ಸಹೋದರ ಸಂದೇಶ ರಹಸ್ಯ ಕ್ಯಾಮೆರಾವೊಂದನ್ನು ಹಿಡಿದುಕೊಂಡು ಮಸಾಜ್‌ಗೆಂದು ಹೋಗಿದ್ದ. ಬಳಿಕ ಆ ಹುಡುಗಿಯೊಂದಿಗೆ ಸಲುಗೆಯಿಂದ ಇರುವಂತಹ ವಿಡಿಯೊವೊಂದನ್ನು ರೆಕಾರ್ಡ್‌ ಮಾಡಿದ್ದ. ಇದನ್ನು ಸ್ಪಾ ಮಾಲೀಕನಿಗೆ ಕಳುಹಿಸಿ ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಅದನ್ನು ಟಿವಿಯಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಸಿದ್ದರು. 15 ಲಕ್ಷ ರೂ. ಕೊಡಿ ಇಲ್ಲದಿದ್ದರೆ ನೇರ ಟಿವಿಯಲ್ಲಿ ಈ ದೃಶ್ಯವನ್ನು ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಸುಲಿಗೆಗೆ ಯತ್ನಿಸಿದ್ದರು ಎನ್ನಲಾಗಿದೆ.
ಈ ಸಂಬಂಧ ಸ್ಪಾ ಮಾಲೀಕ ನೀಡಿದ ದೂರಿನ ಆಧಾರದಲ್ಲಿ ಸಂದೇಶ್‌ ಹಾಗೂ ವೆಂಕಟೇಶ್‌ರನ್ನು ಬಂಧಿಸಲಾಗಿತ್ತು. ದಿವ್ಯ ವಸಂತ ಪತ್ತೆಗೆ ಹುಡುಕಾಟ ನಡೆದಿತ್ತು.
ಖಾಸಗಿ ಟಿವಿಯಲ್ಲಿ ನಿರೂಪಕಿಯಲ್ಲಿದ್ದ ದಿವ್ಯ ವಸಂತ ʻಇಡೀ ರಾಜ್ಯವೇ ಖುಷಿ ಪಡುವ ಸುದ್ದಿʼ ಎಂದು ಹೇಳಿ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆಗಿದ್ದರು. ದಿವ್ಯ ಮತ್ತು ತಂಡ 100ಕ್ಕೂ ಹೆಚ್ಚು ಮಂದಿಗೆ ಈ ರೀತಿ ಸುಲಿಗೆ ಮಾಡಿದೆ ಎಂದು ಹೇಳಲಾಗುತ್ತಿದೆ. ಖಾಸಗಿ ವಾಹಿನಿಯೊಂದರ ʻಗಿಚ್ಚಿ ಗಿಲಿ ಗಿಲಿʼ ಕಾರ್ಯಕ್ರಮದಲ್ಲೂ ದಿವ್ಯ ಕಾಣಿಸಿಕೊಂಡು ರಾಜ್ಯದಲ್ಲಿ ಚಿರಪರಿಚಿತಳಾಗಿದ್ದಳು.

RELATED ARTICLES
- Advertisment -
Google search engine

Most Popular